ಹುಬ್ಬಳ್ಳಿ: ರಾಜಕೀಯಕ್ಕೋಸ್ಕರ ಆರ್ಎಸ್ಎಸ್ ಬ್ಯಾನ್ ಮಾಡಬೇಕು ಎಂದು ಕಾಂಗ್ರೆಸ್ನವರು ಮಾತನಾಡುತ್ತಿದ್ದಾರೆ. ಹಾಗೆ ನಾನು ಕೂಡ ಹೇಳುತ್ತೇನೆ ಕಾಂಗ್ರೆಸ್ ಅನ್ನು ಈ ದೇಶದಿಂದ ನಿಷೇಧ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿ ಅವರು, ಆರ್ಎಸ್ಎಸ್ ರಾಷ್ಟ್ರಭಕ್ತಿ ಕಲಿಸುವ ಸಂಘಟನೆ. ಡಿಕೆ ಶಿವಕುಮಾರ್ ಸಂಘದ ಪ್ರಾರ್ಥನೆ ಮಾಡಿದ್ದಾರೆ. ಇವತ್ತು ರಾಜಕಾರಣಕ್ಕಾಗಿ ಆರ್ಎಸ್ಎಸ್ ಬ್ಯಾನ್ ಮಾಡಬೇಕು ಎಂದು ಹೇಳುತ್ತಾರೆ. ಉಗ್ರಪ್ಪ ಕೂಡಾ ಸಂಘದ ಶಿಕ್ಷಣ ಪಡೆದು ಬಂದಿದ್ದಾರೆ. ನಾನು ಮತ್ತೊಮ್ಮೆ ಹೇಳ್ತೀನಿ ಕಾಂಗ್ರೆಸ್ ಈ ದೇಶದಿಂದ ನಿಷೇಧ ಮಾಡಬೇಕು ಎಂದರು.
ಇದು ಗಾಂಧಿ ಹೇಳಿರುವ ವಿಚಾರ. ಸ್ವಾತಂತ್ರ್ಯ ನಂತರ ಗಾಂಧಿ ಕಾಂಗ್ರೆಸ್ ವಿಸರ್ಜನೆ ಮಾಡಬೇಕೆಂದಿದ್ದರು. ಮೊದಲಿಗೆ ಮಹತ್ಮಾ ಗಾಂಧಿ ಹೇಳಿದ್ದು ನೀವು ಮಾಡಲಿಲ್ಲ. ದೇಶದಲ್ಲಿ ಭಯೋತ್ಪಾದನೆಗೆ ಕಾಂಗ್ರೆಸ್ ಬೆಂಗಾವಲಾಗಿ ನಿಂತಿದೆ. ಭಾರತ ವಿಭಜನೆ ಮಾಡಿದ್ದು, ಧರ್ಮ ಒಡೆದಿದ್ದು ನೀವು. ನೆಹರೂ ಕಾಲದಿಂದಲೂ ಇದೆಲ್ಲ ಇದೆ.
ಸಿದ್ದರಾಮಣ್ಣ ಕೇಸ್ ಇದ್ದವರನ್ನು ಬಿಡುಗಡೆ ಮಾಡಿದ್ದಾರೆ. ಇದೇ ಕಾರಣಕ್ಕೆ ನಾನು ಕಾಂಗ್ರೆಸ್ ನಿಷೇಧ ಮಾಡಬೇಕು ಅಂದಿದ್ದೇನೆ. ಭಯೋತ್ಪಾದನೆ ಹಾಗೂ ನಕ್ಸಲ್ಗೂ ನೀವೇ ಬೆಂಗವಾಲಾಗಿದ್ದೀರಿ. ನನ್ನ ಹತ್ತಿರ ಸಾಕ್ಷಿ ಇರುವುದಕ್ಕೆ ನಾನು ಕಾಂಗ್ರೆಸ್ ನಿಷೇಧ ಮಾಡಬೇಕು ಎಂದಿದ್ದೇನೆ ಎಂದು ಪುನರುಚ್ಚರಿಸಿದರು.
ಹಿಂದೂಗಳ ಮತ ಬೇಡ ಎಂದು ಹೇಳಲಿ: ತಾಕತ್ತಿದ್ದರೆ ಕಾಂಗ್ರೆಸ್ ಹಿಂದೂಗಳ ಮತ ಬೇಡ ಎಂದು ಘೋಷಣೆ ಮಾಡಲಿ. ಸಿದ್ದರಾಮಣ್ಣ ಧಮ್ ಇದ್ರೆ ಹಿಂದೂಗಳ ಮತ ಬೇಡ ಎಂದು ಹೇಳಲಿ. ಕೇಂದ್ರದ ತನಿಖಾ ಸಂಸ್ಥೆಗಳು ನಾಲ್ಕೈದು ವರ್ಷ ಪೂರ್ಣ ತನಿಖೆ ಮಾಡಿ ಪಿಎಫ್ಐ ಬ್ಯಾನ್ ಮಾಡಿದೆ. ನಾನು ಇದನ್ನು ಸ್ವಾಗತಿಸುತ್ತೇನೆ. ಈ ಬಗ್ಗೆ ಕಾಂಗ್ರೆಸ್ ಬೇರೆ ಬೇರೆ ಮಾತುಗಳನ್ನಾಡುತ್ತಿದೆ. ನಿಮ್ಮ ನಿಲುವೇನು?. ನೀವು ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲವಾ?, ಉಗ್ರವಾದಿಗಳನ್ನು ಪೋಷಿಸುತ್ತೀರಾ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಕಾಲದಲ್ಲಿಯೇ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗಿದ್ದು. ನಿಮ್ಮದೇ ಶಾಸಕರಿಗೆ ಚೂರಿ ಹಾಕಿದರು. ಡಿಜೆಕೆಜಿ ಹಳ್ಳಿ ಗಲಾಟೆಯ ಬಗ್ಗೆ ನಿಮ್ಮ ನಿಲುವಿಲ್ಲ. ಧಮ್ ಇದ್ರೆ ನಿಷೇಧ ಮಾಡಿ ಅಂತಿದ್ರು. ಇವತ್ತು ನಮ್ಮ ಸರ್ಕಾರ ಪಿಎಫ್ಐ ನಿಷೇಧ ಮಾಡಿದೆ. ನೀವು ಮತಬ್ಯಾಂಕ್ಗಾಗಿ ರಾಜಕಾರಣ ಮಾಡುತ್ತೀರಾ ಎಂದು ನಾನು ಸಿದ್ದರಾಮಣ್ಣನಿಗೆ ಪ್ರಶ್ನೆ ಕೇಳ್ತೀನಿ ಎಂದರು.
ರಸ್ತೆಗೆ ನಮಸ್ಕಾರ ಮಾಡಿ ಬನ್ನಿ: ಭಾರತ್ ಜೋಡೋ ಯಾತ್ರೆ ಹೋಗುತ್ತಿರುವುದು ಅಟಲ್ ಬಿಹಾರಿ ವಾಜಪೇಯಿ ಮಾಡಿದ ರಸ್ತೆಯಲ್ಲಿ ನೀವು ರಸ್ತೆಗೆ ನಮಸ್ಕಾರ ಮಾಡಿ ಜೋಡೋ ಯಾತ್ರೆ ಕರ್ನಾಟಕ ಪ್ರವೇಶ ಮಾಡಲಿ. ರಾಹುಲ್ ಗಾಂಧಿ ಹೋಗಬೇಕಿರುವುದ ಕೊಡಗಿಗೆ. ಅಲ್ಲಿ ಜನ ಟಿಪ್ಪು ಮತಾಂಧತೆಯ ಬಗ್ಗೆ ಹೇಳುತ್ತಾರೆ. ಅದರ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದರು.
ಟಿಪ್ಪು ಜಯಂತಿ ಮಾಡಿ ರಾಜ್ಯ ಒಡೆದ ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕ್ತೀರಾ?, ರಾಜ್ಯ ಲೂಟಿ ಮಾಡಿ ಜೈಲಿಗೆ ಹೋಗಿ ಬಂದ ರಾಜ್ಯಾಧ್ಯಕ್ಷರ ಜೊತೆ ಹೆಜ್ಜೆ ಹಾಕ್ತೀರಾ?, ಸಿದ್ದರಾಮಣ್ಣ ರಾಷ್ಟ್ರ ವಿರೋಧಿ ಗಳಿಗೆ ಬೆಂಗಾವಲಾಗಿದ್ದಾರೆ, ನೀವು ರಾಷ್ಟ್ರವಿರೋಧಿಗಳಿಗೆ ಬೆಂಗಾವಲಾಗಿದ್ದೀರಾ?, ಇದಕ್ಕೆಲ್ಲ ಉತ್ತರ ಕೊಟ್ಟು ಪಾದಯಾತ್ರೆ ಮಾಡಿ ಎಂದು ರಾಹುಲ್ ಗಾಂಧಿಗೆ ಕಟೀಲ್ ಸವಾಲು ಹಾಕಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಹಿಂದೂಗಳ ವೋಟ್ ಬೇಡ ಅಂತಾ ಹೇಳಲಿ ನೋಡೋಣ: ಮಾಜಿ ಸಿಎಂಗೆ ಈಶ್ವರಪ್ಪ ಸವಾಲು