ಧಾರವಾಡ: ನವಲಗುಂದ ಬಂಡಾಯದ ನಾಡು, ಇಲ್ಲಿ ನೀರಿಗಾಗಿ ರೈತರ ಹೋರಾಟ ನಡೆದಿತ್ತು. ನೀರು ಕೇಳಿದ ರೈತರಿಗೆ ಗುಂಡು ಹಾರಿಸಿದ್ದು ಕಾಂಗ್ರೆಸ್, ಮಹಾದಾಯಿಗೆ ಪ್ರತಿ ಹಂತದಲ್ಲಿ ಕಾಂಗ್ರೆಸ್ ಅಡ್ಡಿ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಸಚಿವ ಮುನೇನಕೊಪ್ಪ ಪರವಾಗಿ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಮನಮೋಹನ ಸಿಂಗ್ ಅವಧಿಯಲ್ಲಿ ನ್ಯಾಯಾಧೀಕರಣ ಆಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಹರಿಯುವ ನೀರಿಗೆ ಗೋಡೆ ಕಟ್ಟಿದ್ದರು. ಆಗ ಹೋರಾಟ ಮಾಡಿದವರ ಮೇಲೆ ಲಾಠಿ ಏಟು ಕೊಡಿಸಿದ್ದು ಸಿದ್ದರಾಮಯ್ಯ ಸರ್ಕಾರ, ಮನೆ ಮನೆಗೆ ಹೊಕ್ಕು ಹೆಣ್ಣು ಮಕ್ಕಳಿಗೆ ಲಾಠಿ ಏಟು ಕೊಟ್ಟಿದ್ದರು. ಅಂತಹವರಿಗೆ ಮತ ಹಾಕ್ತಿರಾ ಇವತ್ತು. ಮಹಾದಾಯಿ ಡಿಪಿಆರ್‌ಗೆ ಮೋದಿ ಅನುಮತಿ ಕೊಟ್ಟಿದ್ದಾರೆ. ಟೆಂಡರ್ ಸಹ ಮಾಡಿದ್ದೇವೆ. ಚುನಾವಣೆ ಬಳಿಕ ಕಾಮಗಾರಿ ಆರಂಭ ಆಗುತ್ತದೆ. ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿ ಇಟ್ಟಿದ್ದೇವೆ. ಎರಡು ವರ್ಷದಲ್ಲಿ ಮಹಾದಾಯಿ ಕಾಮಗಾರಿ ಪೂರ್ಣ ಮಾಡುತ್ತೇವೆ ಎಂದು ಭರವಸೆ ನೀಡಿದ್ರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ವಿಚಾರದ ಕುರಿತು ಮಾತನಾಡಿದ ಸಿಎಂ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ಬ್ಯಾನ್ ಮಾಡುತ್ತೇವೆ ಎಂದು ಹೇಳಿದೆ. ಪಿಎಫ್‌ಐ ಜೊತೆಗೆ ಬಜರಂಗ ದಳವನ್ನು ಸೇರಿಸಿದ್ದಾರೆ. ಅಂತಹ ಪಿಎಫ್‌ಐ ಬ್ಯಾನ್ ಮಾಡಿದ್ದು ನಮ್ಮ ಸರ್ಕಾರ. ಬಜರಂಗ ದಳ ನಮ್ಮ ಸಂಸ್ಕೃತಿ, ಅವರು ಧರ್ಮ ರಕ್ಷಣೆ ಮಾಡುವವರು. ಹನುಮನ ಭಕ್ತರು ಬಜರಂಗಿಗಳು ಎಂದರು.
ನವಲಗುಂದದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಕಾಂಗ್ರೆಸ್ ಇವತ್ತು ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಹೇಳಿದೆ. ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ಡಿಕೆಶಿಗೆ ಧಮ್ ಇದ್ದರೆ, ತಾಕತ್ ಇದ್ದರೆ ಬಜರಂಗದಳ ಬ್ಯಾನ್ ಮಾಡಿ ನೋಡಿ ಎಂದು ಸವಾಲ್ ಹಾಕಿದರು. ಕಾಂಗ್ರೆಸ್‌ಗೆ ಮತ ಹಾಕಿದ್ರೆ ವಿಭೂತಿ, ಕೇಸರಿ ಬ್ಯಾನ್ ಮಾಡ್ತಾರೆ. ರಾಹುಲ್ ಗಾಂಧಿ ಡುಬ್ಲಿಕೇಟ್ ಗಾಂಧಿ. ಬಸವರಾಜ ಬೊಮ್ಮಾಯಿ ಮಹಾದಾಯಿಗಾಗಿ ಪಾದಯಾತ್ರೆ ಮಾಡಿದ್ದರು. ಯಾರು ಪಾದಯಾತ್ರೆ ಮಾಡಿದ್ದರು. ಅವರೇ ಮಹಾದಾಯಿ ಇತ್ಯರ್ಥ ಮಾಡಿದ್ರು. ಸಾವಿರ ರೂಪಾಯಿ ಕೊಡ್ತಾರಂದ್ರು ಕಾಂಗ್ರೆಸ್ ಮತ ಹಾಕಬೇಡಿ. ಸಾವಿರ ರೂಪಾಯಿ ಕೊಟ್ಟು ತಲೆ ಬೋಳಿಸುವ ಕೆಲಸ ಮಾಡ್ತಾರೆ. ನನ್ನ ನಾಲಿಗೆ ಕತ್ತರಿಸುತ್ತೇನೆಂದು ಡಿಕೆಶಿ ಹೇಳ್ತಾರೆ. ನಿನಗೆ ಗಂಡಸ್ತನ ಇದ್ದರೆ ನನ್ನನ್ನ ಮುಟ್ಟಿನೋಡಿ. ಸಿದ್ದರಾಮಯ್ಯ ಒಳ್ಳೆಯ ಮನುಷ್ಯ ಹತ್ತು ಕೆಜಿ ಅಕ್ಕಿ ಕೊಟ್ಟು ಬಿಜೆಪಿಗೆ ಮತ ಹಾಕಿ ಎನ್ನುತ್ತಿದ್ದಾರೆ ಎಂದರು.
ಸಚಿವ ಮುನೇನಕೊಪ್ಪ ಮಾತನಾಡಿ, ಮಹಾದಾಯಿಗಾಗಿ 1,750 ಕೋಟಿ ರೂಪಾಯಿ ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ನಾಳೆ ಚುನಾವಣೆ ಆದ್ರೂ ನವಲಗುಂದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.
ಇದನ್ನೂ ಓದಿ: 15 ದಿನಗಳ ನಂತರ ನಿಮ್ಮ ಸರ್ಕಾರ ಇರಲ್ಲ, ನಿಮಗೆ ಕೊಡಬೇಕಾದ ಶಿಕ್ಷೆಯನ್ನು ಕಾಂಗ್ರೆಸ್ ಪಕ್ಷ ಕೊಡುತ್ತದೆ: ಡಿಕೆ ಶಿವಕುಮಾರ್