ಧಾರವಾಡ : ಆಗಸ್ಟ್ 9ರಿಂದ 15ರವರೆಗೆ ಆಜಾದಿ ಸೇ ಸ್ವರಾಜ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸಮಸ್ಯೆ ಕುರಿತು ಚರ್ಚಿಸಲಾಗುವುದು ಎಂದು ಎಸ್ ಆರ್ ಹಿರೇಮಠ್ ಹೇಳಿದರು.
ನಗರದ ಸಮಾಜ ಪರಿವರ್ತನಾ ಸಮುದಾಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಂತ್ರ ವ್ಯವಸ್ಥೆ ಹಾಳು ಮಾಡುವ ಹುನ್ನಾರ ನಡೆದಿದೆ. ಸರ್ಕಾರಗಳು ಸಹ ಇದಕ್ಕೆ ಬೆಂಬಲ ನೀಡುತ್ತಿವೆ. ಇದನ್ನು ವಿರೋಧಿಸಿ ಆಗಸ್ಟ್ 9ರಂದು ಒಂದು ದಿನದ ಉಪಾವಾಸ ಸತ್ಯಾಗ್ರಹ ಹಾಗೂ ವೆಬಿನಾರ್ ಹಮ್ಮಿಕೊಳ್ಳಲಾಗುವುದು ಎಂದರು. ಸಿಎಫ್‌ಡಿ, ಜನಾಂದೋಲನ ಮಹಾಮೈತ್ರಿ, ಜನಸಂಗ್ರಾಮ ಪರಿಷತ್ ಹಾಗೂ ಸಮಾನ ಮನಸ್ಕ ಸಂಘಟನೆಗಳು ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿವೆ ಎಂದು ತಿಳಿಸಿದರು.
ಮಹತ್ತರ ಬೆಳವಣಿಗೆಯಲ್ಲಿ ಸಿಟಿಜನ್ ಫಾರ್ ಡೆಮಾಕ್ರಟಿಕ್, ಬುದ್ಧಿ ಜೀವಿಗಳ ನ್ಯಾಯಕ್ಕಾಗಿ ಹಾಗೂ ವಲಸೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂದರು.
ಇತ್ತೀಚೆಗೆ ಹೆಸರಾಂತ ವಕೀಲರಾದ ಪ್ರಶಾಂತ್ ಭೂಷಣ್ ಮೇಲೆ ಕಾನೂನು ನಿಂದನೆ ಪ್ರಕರಣ ಮರು ಪರಿಶೀಲನೆ ಮಾಡಬೇಕು ಎಂಬ ಒತ್ತಾಯ ನಮ್ಮದಾಗಿದೆ. ದೇಶದ ಜಾಗೃತ ಜನರು ಈ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದರು.