ಹುಬ್ಬಳ್ಳಿ : ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಅವರು ತಮ್ಮ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದರು. ಸಭಾಪತಿ ಬಸವರಾಜ ಹೊರಟ್ಟಿಯವರ ಗೃಹ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಇಂದು ಬೆಳಿಗ್ಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮಂಜುನಾಥ್, ವಿಧಾನಪರಿಷತ್ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಬಳಿಕ ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಇದೀಗ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದು,ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಆಯನೂರು ಮಂಜುನಾಥ್ ನೈಋತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದರು.
ರಾಜೀನಾಮೆ ಸ್ವೀಕರಿಸಿದ ಬಳಿಕ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಆಯನೂರು ಮಂಜುನಾಥ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗುತ್ತದೆ. ಅವರು ಯಾವುದೇ ವ್ಯಕ್ತಿಯ ಹಾಗೂ ಪಕ್ಷದ ಒತ್ತಡಕ್ಕೆ ಒಳಗಾಗದೇ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಚುನಾವಣೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೆ ಒಟ್ಟು ಆರು ಸದಸ್ಯರು ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಹಿಂದೆ ಸಿ.ಎಂ.ಇಬ್ರಾಹಿಂ ಅವರು ರಾಜೀನಾಮೆ ಸಲ್ಲಿಸಿದ್ದರು. ಒಟ್ಟು ಆರು ಜನ ಸದಸ್ಯರು ರಾಜೀನಾಮೆ ಸಲ್ಲಿಸಿದಂತಾಗಿದೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವ ಅವಶ್ಯಕತೆ ಇದೆ: ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಆಯನೂರು ಮಂಜುನಾಥ್, ನಾನು ಮೂಲತಃ ಕಾರ್ಮಿಕರ ಹಿನ್ನೆಲೆಯಲ್ಲಿ ಬಂದಿದ್ದೇನೆ. ನನಗೆ ವಾಜಪೇಯಿ ಕಾಲದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಾನು ವಿಧಾನ ಪರಿಷತ್ಗೆ ಬಂದಾಗ ಬೇರೆ ಬೇರೆ ಇಲಾಖೆಯ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ನಮ್ಮದೇ ಸರ್ಕಾರ ಇದ್ದಾಗಲೂ ಅವರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ಹಲವಾರು ಹೋರಾಟಗಳನ್ನು ಮಾಡಿದ್ದೇನೆ. ಪರಿಷತ್‌ನಲ್ಲಿ ನನ್ನ ಹೋರಾಟಕ್ಕೆ ನಿರೀಕ್ಷಿತ ಫಲಿತಾಂಶ ಸಿಗದ ಕಾರಣ ರಾಜೀನಾಮೆ ನೀಡಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನಾಳೆ ಶಿವಮೊಗ್ಗ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.
ವಿಧಾನಸಭೆಗೆ ನಾನು ಟಿಕೆಟ್ ಕೇಳಿದ್ದೆ. ನನ್ನ ಪಕ್ಷದಲ್ಲಿ ಕೊಡಲಿಲ್ಲ. ಶಿವಮೊಗ್ಗ, ಮಾನ್ವಿಗೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ ಎಂದರು. ಶಿವಮೊಗ್ಗದಲ್ಲಿ ಕೊಲೆ, ಸುಲಿಗೆ ಆಗುತ್ತಿವೆ. ಶಿವಮೊಗ್ಗ ಅಶಾಂತ ನಗರವಾಗಿದೆ. ಹೀಗಾಗಿ ಅಲ್ಲಿ ಯಾರೂ ಬಂಡವಾಳ ಹೂಡಿಕೆ ಮಾಡಲು ಬರುತ್ತಿಲ್ಲ.
ನಮ್ಮ ಜಿಲ್ಲೆಯಲ್ಲಿ ಮಹಾನ್ ನಾಯಕರು ಇದ್ದಾರೆ. ಆದರೂ ಜಿಲ್ಲೆಯಲ್ಲಿ ಶಾಂತಿ ಇಲ್ಲವಾಗಿದೆ ಎಂದು ಹೇಳಿದರು.
ಬಡವರ ಕುಟುಂಬ ರಕ್ಷಣೆ ಮಾಡಬೇಕಿದೆ. ನನ್ನ ಪಕ್ಷದಲ್ಲಿ ನನಗೆ ಅವಕಾಶ ಸಿಕ್ಕಿಲ್ಲ. ನನ್ನ ನಿಲುವುಗಳನ್ನು ಕೇಳಿ ಕುಮಾರಸ್ವಾಮಿ ಬಿ ಪಾರಂ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ನಾಳೆ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಗೆ ಗುಡ್ ಬೈ ಹೇಳಿ ಜೆಡಿಎಸ್ ಸೇರ್ಪಡೆಯಾದ ಆಯನೂರು ಮಂಜುನಾಥ್