ಹುಬ್ಬಳ್ಳಿ: ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಭೀಕರತೆ ದಿನಕಳೆದಂತೆ ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. ಮಹಾಮಾರಿ ಹೊಡೆತಕ್ಕೆ ಸಿಲುಕಿರುವ ಜನರು ಬೆಡ್, ಆಕ್ಸಿಜನ್ ಸಿಗದೆ ರಸ್ತೆಯಲ್ಲೇ ಸಾವನ್ನಪ್ಪಿರುವ ಅದೆಷ್ಟೋ ನಿದರ್ಶನಗಳು ಕಣ್ಣ ಮುಂದೆ ಇವೆ. ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎನಿಸಿಕೊಂಡಿರುವ ಕಿಮ್ಸ್ ಕೂಡ ಈಗ ಬೆಡ್ ಸಮಸ್ಯೆ ಎದುರಿಸುತ್ತಿದೆ.
ಹೌದು, ಉತ್ತರ ಕರ್ನಾಟಕ ಭಾಗದ ಜನರ ಪಾಲಿನ ಸಂಜೀವಿನಿ ಎಂದೇ ಕರೆಯಿಸಿಕೊಳ್ಳುವ ಕಿಮ್ಸ್ ಆಸ್ಪತ್ರೆಯಲ್ಲೇ ಇದೀಗ ವೆಂಟಿಲೇಟರ್, ಆಕ್ಸಿಜನ್ ಬೆಡ್ ಸಮಸ್ಯೆ ತಲೆದೋರಿದೆ. ಕಳೆದ ವರ್ಷ ಫ್ಲಾಸ್ಮಾ ಥೆರಪಿ ಹಾಗೂ ಇನ್ನಿತರೆ ಸೌಕರ್ಯಗಳ ಐಸಿಎಂಆರ್ನಿಂದಲೇ ಆಸ್ಪತ್ರೆ ಮೆಚ್ಚುಗೆ ಪಡೆದಿತ್ತು. ಆದ್ರೀಗ ಆಕ್ಸಿಜನ್ ಬೆಡ್ ಸಮಸ್ಯೆ ಎದುರಾಗಿದೆ.
ಈ ಬಾರಿ ರಾಜ್ಯದಲ್ಲಿ ಆಕ್ಸಿಜನ್ ಅಭಾವ ಸೃಷ್ಟಿಯಾಗಿದೆ. ಆದ್ರೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಮಾತ್ರ ಸುಮಾರು 40 ಕಿಲೋ ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ ಧಾರವಾಡ ಜಿಲ್ಲಾಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 20 ಕಿಲೋ ಲೀಟರ್ ಸಾಮರ್ಥ್ಯದ ಆಕ್ಸಿಜನ್ ವ್ಯವಸ್ಥೆ ಇದೆ. ಕಿಮ್ಸ್ನ ಆಕ್ಸಿಜನ್ ಬರೋಬ್ಬರಿ 1,200 ಬೆಡ್ಗಳಿಗೆ ಒದಗಿಸಬಹುದಾಗಿದೆ. ಸದ್ಯ ಕಿಮ್ಸ್ ಹಾಗೂ ಧಾರವಾಡದಲ್ಲಿ ಆಕ್ಸಿಜನ್ ಅಭಾವ ಸೃಷ್ಟಿಯಾಗಿಲ್ಲ. ಪ್ರತಿನಿತ್ಯ 250ರಿಂದ 280 ಪ್ರಕರಣಗಳು ದಾಖಲಾಗುತ್ತಿದ್ದರೂ 200ಕ್ಕಿಂತ ಹೆಚ್ಚಿನ ಜನರು ಚೇತರಿಸಿಕೊಂಡು ಡಿಸ್ಚಾರ್ಜ್ ಆಗುತ್ತಿದ್ದಾರೆ. ಹೀಗಾಗಿ ಕೇವಲ 30 ಪ್ರತಿಶತ ರೋಗಿಗಳು ಮಾತ್ರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುತ್ತಿದ್ದು, ಅವರಿಗೆ ನೀಡಬೇಕಾದ ವೆಂಟಿಲೇಟರ್ ಹಾಗೂ ಆಕ್ಸಿಜನ್ ಸೌಲಭ್ಯ ನೀಡುತ್ತಿದ್ದೇವೆ. ಆದ್ರೆ ಸದ್ಯ ಆಕ್ಸಿಜನ್ ಬೆಡ್ಗಳೆಲ್ಲವೂ ಫುಲ್ ಆಗಿದ್ದು, ಸೀಂಕಿತರ ಸಂಖ್ಯೆ ಗಣನೀಯವಾಗಿ ಏರಿದರೆ ಸಮಸ್ಯೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ ಕಿಮ್ಸ್ ನಿರ್ದೇಶಕರು.
ಕಿಮ್ಸ್ನಲ್ಲಿರುವ ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್ಗಳು ಫುಲ್ ಆಗಿವೆ. ಕೇವಲ ಸಾಮಾನ್ಯ ಬೆಡ್ಗಳು ಮಾತ್ರ ಖಾಲಿ ಉಳಿದುಕೊಂಡಿವೆ. ಈ ಪರಿಸ್ಥಿತಿ ಕಿಮ್ಸ್ನಲ್ಲಿ ಮಾತ್ರವಲ್ಲ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲೂ ಇದೆ. ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್ಗಳಿಗೆ ಭಾರಿ ಬೇಡಿಕೆ ಇದೆ.
ಕಳೆದ ವರ್ಷದಂತೆ ಈ ವರ್ಷವೂ ಅಕ್ಕಪಕ್ಕದ ಜಿಲ್ಲೆಯಲ್ಲಿ ಕೊರೊನಾಗೆ ತುತ್ತಾಗಿರುವ ಗಂಭೀರ ಸ್ವರೂಪದ ಪ್ರಕರಣಗಳನ್ನು ಕೂಡ ಕಿಮ್ಸ್ಗೆ ಅಡ್ಮಿಟ್ ಮಾಡಿಕೊಳ್ಳಲಾಗುತ್ತಿದೆ. ಕೇವಲ ಧಾರವಾಡ ಜಿಲ್ಲೆಯಷ್ಟೇ ಅಲ್ಲದೇ ಗದಗ, ಹಾವೇರಿ ಜಿಲ್ಲೆಯ ರೋಗಿಗಳಿಗೂ ಕೂಡ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಕಿಮ್ಸ್ನಲ್ಲಿ ಬೆಡ್ಗಳ ಕೊರತೆ ಕಂಡುಬರುತ್ತಿದೆ. ಈ ಸಮಸ್ಯೆ ಸರಿಪಡಿಸಲು ಮತ್ತಷ್ಟು ಬೆಡ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ಬೆಡ್ ವ್ಯವಸ್ಥೆ ಇದೆಯೇ?
ಒಟ್ಟಿನಲ್ಲಿ ಉತ್ತರ ಕರ್ನಾಟಕ ಜನರ ಪಾಲಿನ ಸಂಜೀವಿನಿ ಆಗಿರುವ ಕಿಮ್ಸ್ ಆಸ್ಪತ್ರೆಯಲ್ಲೂ ಬೆಡ್ ಕೊರತೆ ಕಂಡು ಬರುತ್ತಿದೆ. ಅದರ ಜತೆಗೆ ಪ್ರತಿದಿನ 1000-2000 ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ರೆಮಿಡಿಸಿವಿರ್ ಔಷಧಿಯ ಕೊರತೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ರೆ ವಾಸ್ತವವಾಗಿ ಔಷಧಿ ಕೊರತೆ ಇದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ತಗೆದುಕೊಳ್ಳಬೇಕಿದೆ.