ಹುಬ್ಬಳ್ಳಿ: ಒಂದು ಕಡೆ ಮಹಿಳೆಯರು ಖುಷಿಯಿಂದ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದರೆ. ಇನ್ನೊಂದೆಡೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಟೋ ಚಾಲಕರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ನಗರದ ನಿಲೀಜನ್ ರಸ್ತೆಯಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಆಟೋ ಚಾಲಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ 'ಶಕ್ತಿ ಯೋಜನೆ'ಯು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿರುವುದು ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಮಹಿಳಾ ಪ್ರಯಾಣಿಕರು ನಮಗೆ ಆಧಾರವಾಗಿದ್ದಾರೆ. ಆದರೆ, ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯಿಂದ ಕೆಲಸವಿಲ್ಲದಂತಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಉಚಿತ ಬಸ್ಗೆ ಅವಕಾಶ ನೀಡಬಾರದು ಆಟೋ ಚಾಲಕರು ಒತ್ತಾಯಿಸಿದರು.
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಆಟೋ ರಿಕ್ಷಾ ಚಾಲಕರಿಗೆ ಪ್ರತಿ ತಿಂಗಳು 10 ಸಾವಿರ ನೀಡಬೇಕು. ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣ ಉಚಿತವಾಗಿ ನೀಡಬೇಕು. ಚಾಲಕರು ಅಪಘಾತದಲ್ಲಿ ಸಾವನ್ನಪ್ಪಿದರೆ 5 ಲಕ್ಷ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಆಟೋ ಚಾಲಕರ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ, ಆಟೋ ರಿಕ್ಷಾ ಬಂದ್ಗೆ ಕರೆ ನೀಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಆಟೋ ಚಾಲಕ ಮುರಳಿ ಇಂಗಳಹಳ್ಳಿ ಮಾತನಾಡಿ "ಉತ್ತರ ಕರ್ನಾಟಕ ಮತ್ತು ಹುಬ್ಬಳ್ಳಿಯ ವಿವಿಧ ಆಟೋ ರಿಕ್ಷಾ ಚಾಲಕ ಸಂಘದಿಂದ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿ ನೀಡುತ್ತಿದ್ದೇವೆ. ಹಿಂದಿನ ಸರ್ಕಾರ ಬಡ ಆಟೋ ಚಾಲಕರಿಗೆ ಏನೂ ಮಾಡಿಲ್ಲ. ಇಂದು ಗ್ಯಾಸ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಉಚಿತ ವಿದ್ಯುತ್ ಕೂಡ 75 ಪೈಸೆ ಹೆಚ್ಚಳವಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿರುವುದು ನಮಗೆ ಒಪ್ಪಿಗೆ ಇಲ್ಲ" ಎಂದರು.
"ಬಡ ಆಟೋ ಚಾಲಕರು ದಿನಕ್ಕೆ ಇನ್ನೂರು - ಮುನ್ನೂರು ರೂಪಾಯಿಗಳನ್ನು ದುಡಿದು ತಿನ್ನುವವರು. ಈಗಾಗಲೇ ಕೋವಿಡ್ನಿಂದ ಬಹಳಷ್ಟು ಆಟೋ ಚಾಲಕರು ಕುಟುಂಬಗಳು ತೊಂದರೆ ಅನುಭವಿಸಿವೆ. ಆಗ ಸರ್ಕಾರ ನಮಗೆ ಪರಿಹಾರ ಕೊಟ್ಟಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನಗರ ಹೊರತುಪಡಿಸಿ ಹೊರಗೆ ಅವಕಾಶ ಮಾಡಿಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇವೆ. ಇಲ್ಲದಿದ್ದಲ್ಲಿ ಕರ್ನಾಟಕದಾದ್ಯಂತ ಪ್ರತಿಭಟನೆ ನಡೆಸಿ ಬಂದ್ಗೆ ಕರೆ ನೀಡುತ್ತೇವೆ"- ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ.
ಸಿಎಂ ಸಂತೃಪ್ತಿ: ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಚಾಲನೆ ನೀಡಿದ್ದಾರೆ. 'ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೇ ಸಮಾಜದ ಎಲ್ಲ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು' ಎಂದು ಸಿಎಂ ಹೇಳಿದ್ದರು.
ಇದನ್ನೂ ಓದಿ: ಉಚಿತವಾಗಿ ಪ್ರಯಾಣಿಸುವ ಮುನ್ನ ನಮಸ್ಕರಿಸಿ ಬಸ್ ಹತ್ತಿದ ತಾಯಿ.. ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು ಎಂದ ಸಿಎಂ