ಹುಬ್ಬಳ್ಳಿ: ಲಾಕ್ಡೌನ್ ಆದೇಶ ಹಿನ್ನೆಲೆಯಲ್ಲಿ ಜನರು ಮನೆ ಬಿಟ್ಟು ಬರದಂತೆ ಸರ್ಕಾರ ಆದೇಶಿಸಿದೆ. ಆದರೆ, ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಹಾಗೂ ರೈಲ್ವೆ ಇಲಾಖೆ ಸಫಾಯಿ ಕರ್ಮಚಾರಿಗಳು ನಿತ್ಯ ಕಾಯಕದಲ್ಲಿ ತೊಡಗಿದ್ದಾರೆ. ಹೀಗಾಗಿ ಅವರ ನೆರವಿಗೆ ಹುಬ್ಬಳ್ಳಿಯ ವರ್ತಕರ ಸಂಘ ಮುಂದೆ ಬಂದಿದೆ.
ದಾಜೀಬಾನಪೇಟೆ, ಅಕ್ಕಿಹೊಂಡ ಹಾಗೂ ಘಂಟಿಕೇರಿ ವ್ಯಾಪಾರಸ್ಥರು ರೈಲ್ವೆ ನಿಲ್ದಾಣದಲ್ಲಿ ಇವತ್ತು ದಿನ ಬಳಕ್ಕೆ ವಸ್ತುಗಳನ್ನು ವಿತರಿಸಿದರು. ಅಕ್ಕಿ, ಗೋಧಿ, ಎಣ್ಣೆ, ಉಪ್ಪು, ಸಕ್ಕರೆ, ಚಹಾ ಪುಡಿ ಸೇರಿ ಇನ್ನಿತರೆ ವಸ್ತುಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದರು.
ಇದರ ಜೊತೆಗೆ ಕಾರ್ಮಿಕರನ್ನು ಮೂರು ಅಡಿ ಅಂತರದಲ್ಲಿ ಕೂಡಿಸಿ ಆಹಾರ ಪದಾರ್ಥ ವಿತರಣೆ ಮಾಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಂದೇಶ ರವಾನಿಸಿರೋದು ವಿಶೇಷವಾಗಿತ್ತು.