ಧಾರವಾಡ: ಮಕರ ಸಂಕ್ರಮಣದ ಕೆಟ್ಟ ಕರಿ ದಿನ ಇಟಿಗಟ್ಟಿ ಬಳಿಯ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಅಪಘಾತಕ್ಕೆ ಅಶೋಕ್ ಖೇಣಿ ಅವರೇ ನೇರ ಹೊಣೆ ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೈಪಾಸ್ ರಸ್ತೆಯಲ್ಲಿ ಆಗುವ ದುರಂತಕ್ಕೆಲ್ಲ ಅಶೋಕ್ ಖೇಣಿ ಅವರೇ ಕಾರಣ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚಿಂಚೋರೆ ಆಗ್ರಹಿಸಿದರು.
1999ರ ಮೇ 25 ರಂದು ಅಶೋಕ್ ಖೇಣಿ ಅವರಿಗೆ ಈ ರಸ್ತೆಯನ್ನು ಗುತ್ತಿಗೆ ನೀಡಲಾಗಿತ್ತು. ಇಂಡಿಯಾದಲ್ಲೇ ಇದು ಮೊದಲ ಗುತ್ತಿಗೆಯಾಗಿದೆ. ಅಶೋಕ ಖೇಣಿ ಅವರು ನಂದಿ ಇನ್ಫ್ರಾಸ್ಟ್ರಕ್ಚರ್ ಮೂಲಕ ಈ ರಸ್ತೆಯಲ್ಲಿ ಟೋಲ್ ಸಂಗ್ರಹಣೆ ಮಾಡುತ್ತಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇಂತಹ ರಸ್ತೆ ಇಲ್ಲ. ಅಷ್ಟೊಂದು ಕೆಟ್ಟದಾಗಿ ಅವರು ಈ ರಸ್ತೆ ನಿರ್ಮಾಣ ಮಾಡಿದ್ದಾರೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಅಪಘಾತ ಸಂಭವಿಸುತ್ತಲೇ ಇರುತ್ತವೆ. 25 ವರ್ಷಗಳಿಂದ ಅಶೋಕ್ ಖೇಣಿ ಅವರು ಈ ರಸ್ತೆ ನಿರ್ವಹಣೆ ಮಾಡುತ್ತಿದ್ದು, ಷಟ್ಪಥ ರಸ್ತೆ ನಿರ್ಮಾಣ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಪ್ರತಿದಿನ ಇಲ್ಲಿ 12 ರಿಂದ 13 ಲಕ್ಷ ಟೋಲ್ ಸಂಗ್ರಹಣೆಯಾಗುತ್ತದೆ. ಈ ಹಣ ಪಡೆದು ಖೇಣಿ ಅವರು ಯಾವುದೇ ಕೆಲಸ ಮಾಡಿಸಿಲ್ಲ ಎಂದು ಚಿಂಚೋರೆ ವಾಗ್ದಾಳಿ ನಡೆಸಿದರು.
ಓದಿ : ಪ್ರವಾಸಕ್ಕೆ ಹೊರಟವರ ಬದುಕು ದಾರುಣ ಅಂತ್ಯ: ಸಾವಲ್ಲೂ ಒಂದಾಯ್ತು 40 ವರ್ಷದ ಗೆಳೆತನ