ಹುಬ್ಬಳ್ಳಿ: ಆನೆದಂತದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಳಗಾವಿ ಹಾಗೂ ಮಹಾರಾಷ್ಟ್ರ ಮೂಲದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಸಿಐಡಿ ವಿಶೇಷ ಅರಣ್ಯ ಸಂಚಾರಿ ದಳದ ತಂಡವು ಯಶಸ್ವಿಯಾಗಿದೆ.
ಕೊಲ್ಹಾಪುರ ಮೂಲದ ಸಾತ್ ಜಮಾದಾರ್, ವಿಜಯ ಕುಂಬಾರ, ಸಾಗರ ಪುರಾಣಿಕ್, ನಿಪ್ಪಾಣಿಯ ವಿನಾಯಕ ಕಾಂಬ್ಳೆ, ದಾನಾಜಿ ಪಾಟೀಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಆನೆ ದಂತದಿಂದ ತಯಾರಿಸಿದ್ದ 384 ಗ್ರಾಂ ತೂಕದ ಅಲಂಕಾರ ಪೆಟ್ಟಿಗೆ, 112 ಗ್ರಾಂ ತೂಕದ ಕೈಗಡುಗ, 350 ಗ್ರಾಂ ಆಯತಾಕಾರದ ಪೆಟ್ಟಿಗೆ, 279 ಗ್ರಾಂ ಮೊಟ್ಟೆ ಆಕಾರದ ಪೆಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ. ಇವುಗಳ ಮೌಲ್ಯ ಕೋಟ್ಯಂತರ ರೂಪಾಯಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಐಡಿ ಅರಣ್ಯ ಸಂಚಾರಿ ದಳ ತಂಡ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿ ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಿದಾಗ, ರಾಜಸ್ಥಾನದ ಒಂದು ಸಂತೆಯಲ್ಲಿ ಸಾಧು ಸಂತರ ಬಳಿ ಖರೀದಿಸಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಈ ಪ್ರಕರಣವನ್ನು ಹುಬ್ಬಳ್ಳಿಯ ಸಿಐಡಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಮುತ್ತಣ್ಣ ಸರವಗೋಳ, ಸಬ್ ಇನಸ್ಪೆಕ್ಟರ್ ಪ್ರಸಾದ್ ಪಣೇಕರ್, ಎಮ್.ಎ.ಪಾಠಕ್, ಅಶೋಕ ನಾಗರಳ್ಳಿ, ರವೀಂದ್ರ ಗೋನೇನವರ, ಎಸ್.ಎಚ್.ಹುಲಗೇರ, ದಿವ್ಯ ನಾಯಕ ತಂಡ ಪತ್ತೆ ಮಾಡಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಮಿಕನ ಮೇಲೆ ಕಾಡಾನೆ ದಾಳಿ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೋರ್ವ ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಸಮೀಪದ ಹೆಬ್ಬಾಳೆ ಗ್ರಾಮದಲ್ಲಿ ಬುಧವಾರ ನಡೆದಿತ್ತು. ಹೆಬ್ಬಾಳೆ ಸಮೀಪದ ಕಾಫಿ ತೋಟಕ್ಕೆ ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ಕಾಡಾನೆ ಏಕಾಏಕಿ ಕಾರ್ಮಿಕನ ಮೇಲೆ ದಾಳಿಗೆ ಮುಂದಾಗಿತ್ತು. ಆನೆಯನ್ನು ಕಂಡ ಕೂಡಲೇ ಕಾರ್ಮಿಕ ಕೂಗುತ್ತ ಜೀವ ಭಯದಲ್ಲಿ ಓಡಿ ಹೋಗಿದ್ದ. ಕಾಡಾನೆ ಕೂಡ ಆತನ ಹಿಂದೆಯೇ ಓಡಿತ್ತು. ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದ ಒಂಟಿ ಸಲಗ ನಂತರ ವಾಪಸ್ ಹೋಗಿತ್ತು. ಅಷ್ಟೇ ಅಲ್ಲದೆ, ಬುಧವಾರ ಬೆಳಗಿನ ಜಾವ ಕಳಸ ತಾಲೂಕಿನ ಮುಂಡುಗದ ಗ್ರಾಮದ ಮನೆಯೊಂದರ ಪಕ್ಕದ ಕಾಫಿ ತೋಟದಲ್ಲಿ ಕಾಡಾನೆ ಬಂದು ನಿಂತಿತ್ತು.
ಮುಂಜಾನೆ ಮನೆಯಿಂದ ಹೊರಬಂದ ಮನೆಯವರು ಆನೆಯನ್ನು ನೋಡಿ ಭಯಗೊಂಡು ಕೂಡಲೇ ಒಳಗೆ ಹೋಗಿದ್ದರು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಜೀವಭಯದಲ್ಲಿ ಬದುಕುವಂತಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿತ್ತು. ಇದೀಗ ಆನೆಗಳ ಹಾವಳಿ ಮೂಡಿಗೆರೆಯಿಂದ ಕಳಸಕ್ಕೆ ಶಿಫ್ಟ್ ಆಗಿದ್ದು, ಮೂರ್ನಾಲ್ಕು ವರ್ಷದಲ್ಲಿ ಏಳೆಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ, ಅರಣ್ಯ ಇಲಾಖೆ ಕೂಡಲೇ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬಾಂಗ್ಲಾ ಕಾರ್ಮಿಕರಿಂದ ಗ್ರಾಮಸ್ಥರ ಮೇಲೆ ಹಲ್ಲೆ ಆರೋಪ: ಕಾಫಿ ತೋಟದ ರೈಟರ್ ಜೊತೆ ಜಗಳವಾಡುತ್ತಿದ್ದಾಗ ಗಲಾಟೆ ಬಿಡಿಸಲು ಬಂದ ಗ್ರಾಮಸ್ಥರ ಮೇಲೆ ಬಾಂಗ್ಲಾ ಮೂಲದ ಕಾರ್ಮಿಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಆರೋಪ ಘಟನೆ ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮದಲ್ಲಿ ನಡೆದಿದ್ದು, ಹಲ್ಲೆಗೊಳಗಾದ ಗ್ರಾಮಸ್ಥರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾಡಾನೆ ದಾಳಿಯಿಂದ ಪಾರಾದ ಕಾರ್ಮಿಕ: ಒಂಟಿ ಸಲಗ ಸೆರೆಗೆ ಜನರ ಒತ್ತಾಯ