ಹುಬ್ಬಳ್ಳಿ: ಬೇಸಿಗೆ ಬಂತು ಅಂದರೆ ಸಾಕು ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಅದರಲ್ಲೂ ಪಕ್ಷಿ ಸಂಕುಲ ನೀರಿಲ್ಲದೆ ಪರದಾಡುವುದನ್ನು ನೋಡಿದ್ದೇವೆ. ಹೀಗೆ ಬೇಸಿಗೆಯಲ್ಲಿ ಪಕ್ಷಿ ಸಂಕುಲಕ್ಕೆ ಕುಡಿಯುವ ನೀರಿನ ದಾಹ ನೀಗಿಸುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲೊಂದು ಸಂಸ್ಥೆ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದೆ.
ಹೌದು.. ಏಪ್ರಿಲ್ ತಿಂಗಳಿನಲ್ಲಿ ನಾವೆಲ್ಲರೂ ಫೂಲ್ ಮಾಡುವ ಬಗ್ಗೆ ವಿಚಾರ ಮಾಡಿರುತ್ತೇವೆ. ಆದರೆ ಹುಬ್ಬಳ್ಳಿಯ ಕುಬೇರ ಗೌಡ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏಪ್ರಿಲ್ ಫೂಲ್ ಬದಲು ಏಪ್ರಿಲ್ ಕೂಲ್ ಎಂಬ ಕಾರ್ಯಕ್ರಮದ ಮೂಲಕ ಪಕ್ಷಿ ಸಂಕುಲದ ದಾಹವನ್ನು ನೀಗಿಸುವ ಕಾರ್ಯ ಮಾಡಲಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಫೀಸ್ ಎದುರಿಗೆ ಇರುವ ಗಾರ್ಡನ್ನಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಪಕ್ಷಿಗಳಿಗೆ ಮರದ ಕಾಂಡದಲ್ಲಿ ನೀರಿನ ಅರವಟಿಗೆ ನಿರ್ಮಿಸಿ ನೀರು ಹಾಕುವ ಕಾರ್ಯದ ಮೂಲಕ ಜನಜಾಗೃತಿ ಮೂಡಿಸಲಾಯಿತು.
ಏಪ್ರಿಲ್ ಫೂಲ್ ಆಚರಣೆಯನ್ನು ಕೈ ಬಿಟ್ಟು ಪಕ್ಷಿಗಳಿಗೆ ನೀರುಣಿಸುವ ಏಪ್ರಿಲ್ ಕೂಲ್ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಕುಬೇರ ಚಾರಿಟೇಬಲ್ ಟ್ರಸ್ಟ್ ಕಾರ್ಯ ಹೀಗೆಯೇ ವಿಸ್ತರಿಸಲಿ ಎಂಬುದು ನಮ್ಮ ಆಶಯವಾಗಿದೆ.