ಹುಬ್ಬಳ್ಳಿ: ಬಹು ದಿನಗಳ ನಂತರ ಕೊನೆಗೂ ಭಾರಿ ಕಸರತ್ತು ಮಾಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್- ಉಪಮೇಯರ್ ಆಯ್ಕೆ ಮಾಡಲಾಗಿದೆ. ಈಗ ಪಾಲಿಕೆಯ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಗಾದಿಗೆ ನಿರೀಕ್ಷೆಯಂತೆ ಭಾರತೀಯ ಜನತಾ ಪಕ್ಷ ಏರಿದೆ. ಆದರೆ ಈಗ ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷದ ನಾಯಕನ ಪಟ್ಟಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ.
ಕಳೆದ ಮೂರು ವರ್ಷಗಳಿಂದ ಪಾಲಿಕೆಗೆ ಚುನಾವಣೆ ನಡೆದಿರಲಿಲ್ಲ. ಜನರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಚುನಾವಣೆ ನಡೆಸಲಾಯಿತು. ನಂತರ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಮತ್ತೇ 9 ತಿಂಗಳು ಕಾಲ ನೆನೆಗುದಿಗೆ ಬಿದ್ದಿತ್ತು. ಇದೀಗ ಮೇಯರ್- ಉಪಮೇಯರ್ ಆಯ್ಕೆ ಮಾಡಲಾಗಿದೆ. ಈಗ ಪ್ರತಿಪಕ್ಷದ ನಾಯಕನ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ಬಹುದೊಡ್ಡ ಕಸರತ್ತು ನಡೆಯುತ್ತಿದೆ.
ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ 82 ಸದಸ್ಯ ಬಲದ ಪಾಲಿಕೆಯಲ್ಲಿ 39 ಸ್ಥಾನಗಳನ್ನು ಗೆದ್ದು ಬಿಜೆಪಿ ಆಡಳಿತ ಪಕ್ಷವಾಗಿದೆ. 33 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಪ್ರತಿಪಕ್ಷದ ನಾಯಕನಾಗಲು ಕೆಲ ಕಾಂಗ್ರೆಸ್ ಸದಸ್ಯರು ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಅವರ ಬೆನ್ನು ಬಿದ್ದಿದ್ದಾರೆ. ಕೆಲವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಬೆನ್ನು ಬಿದ್ದಿದ್ದಾರೆ.
ಇದನ್ನೂ ಓದಿ: ಅವಳಿ ನಗರದ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ: ನೂತನ ಮೇಯರ್ - ಉಪಮೇಯರ್ ಭರವಸೆ
ಇನ್ನೂ ಕೆಲ ಸದಸ್ಯರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಶಿಫಾರಸು ಮಾಡಿಸಲು ಮುಂದಾಗಿದ್ದಾರೆ. ಶಾಸಕ ಅಬ್ಬಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಿರಂಜನಯ್ಯ ಹಿರೇಮಠ ಪೈಪೋಟಿ ನಡೆಸುತ್ತಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಸಮರ್ಥವಾಗಿ ಪ್ರತಿಪಕ್ಷದ ನಾಯಕನ ಸ್ಥಾನ ನಿಭಾಯಿಸುತ್ತೇನೆ ಎನ್ನುತ್ತಿದ್ದಾರೆ.