ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆಯೇ ಆಗಿಲ್ಲ. ಆದ್ರೆ, ಸರ್ಕಾರ ರಾಜ್ಯದಲ್ಲಿನ ಇತರೆ ಮಹಾನಗರ ಪಾಲಿಕೆಗಳ ಜೊತೆಗೆ ಹು-ಧಾ ಮಹಾನಗರ ಪಾಲಿಕೆ ಮಹಾಪೌರ, ಉಪಮಹಾಪೌರ ಸ್ಥಾನಗಳಿಗೆ ಮೀಸಲಾತಿ ಘೋಷಿಸಿದೆ. ಮಹಾಪೌರ ಸ್ಥಾನವನ್ನು ಸಾಮಾನ್ಯ ಮಹಿಳೆಗೆ, ಉಪಮಹಾಪೌರ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ.
ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಬೇಕಾಗಿದೆಯಾದರೂ, ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ವಾರ್ಡ್ಗಳ ಮೀಸಲು ವಿಚಾರ ಇನ್ನು ಮುಗಿದಿಲ್ಲವಾಗಿದ್ದರಿಂದ, ಹು-ಧಾ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿಲ್ಲ. ರಾಜ್ಯ ಸರ್ಕಾರ ರಾಜ್ಯದ ಒಟ್ಟು 11 ಪಾಲಿಕೆಗಳ ಮೀಸಲಾತಿ ಘೋಷಣೆ ಮಾಡಿ ಡಿ. 26 ರಂದು ಆದೇಶ ಹೊರಡಿಸಿದೆ. ಹು-ಧಾ ಮಹಾನಗರ ಪಾಲಿಕೆ ಪ್ರಸ್ತುತ 67 ಸದಸ್ಯ ಬಲ ಹೊಂದಿದ್ದು, ವಾರ್ಡ್ಗಳ ಪುನರ್ ವಿಂಗಡಣೆಯೊಂದಿಗೆ ಅದನ್ನು 82 ಸದಸ್ಯ ಬಲಕ್ಕೆ ಹೆಚ್ಚಿಸಲು ಯತ್ನಿಸಲಾಗಿದೆ.
ಇನ್ನೂ ಕೆಲವೊಂದು ವಾರ್ಡ್ಗಳ ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಕೆಲವರು ಕೋರ್ಟ್ ಮೊರೆ ಹೋಗಿದ್ದರು. ರಾಜ್ಯ ಸರ್ಕಾರ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು ಹೊಸದಾಗಿ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದು, ಅದರ ಪ್ರಕ್ರಿಯೆ ನಡೆದ ನಂತರ ಚುನಾವಣೆ ಘೋಷಣೆ ಆಗಲಿದೆ.