ಹುಬ್ಬಳ್ಳಿ : ವಾಚ್ ಟವರ್, ಬರ್ಮಾ ಬ್ರಿಡ್ಜ್, ಹಗ್ಗದ ಮೂಲಕ ಸಾಹಸಮಯ ಆಟವಾಡುತ್ತಿರುವ ಮಕ್ಕಳು.. ಹೀಗೆ ಒಂದಾ ಎರಡಾ, ನಗರದ ಗದಗ ರಸ್ತೆಯ ವಿನೋಬಾ ನಗರದಲ್ಲಿರುವ ಅಡ್ವೆಂಚರ್ ಪಾರ್ಕ್ನಲ್ಲಿ ಸಾಕಷ್ಟು ವೈಶಿಷ್ಟ್ಯಗಳಿವೆ.
ಕಳೆದ 5-6 ತಿಂಗಳ ಹಿಂದೆ ವಿನೋಬಾ ನಗರದ ಈ ಜಾಗ ಕಸದ ರಾಶಿಯ ಕೇಂದ್ರ ಸ್ಥಾನವಾಗಿತ್ತು. ಇಲ್ಲಿನ ಗಬ್ಬು ವಾಸನೆ ತಡೆಯಲಾರದೇ ಸಾರ್ವಜನಿಕರು ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದರು.
ಈ ಹಿನ್ನೆಲೆ ಈ ಸಮಸ್ಯೆಗೊಂದು ಪರಿಹಾರ ಕಂಡು ಹಿಡಿಯಬೇಕೆಂದು ರೈಲ್ವೆ ವಲಯದ ಅಧಿಕಾರಿಗಳ ತಂಡ ಯೋಚಿಸಿತು. ಇವರಿಗೆ ಸ್ಕೌಟ್ & ಗೈಡ್ಸ್ ತಂಡದ ಸದಸ್ಯರು ಸಹಕರಿಸಿದರು.
ರೈಲ್ವೆ ಇಲಾಖೆ ಬಳಸಿರುವ ಟಯರ್, ಹಳೆಯ ಕಂಬಗಳು, ಕಮಾನುಗಳು ಇನ್ನುಳಿದ ಸಾಮಗ್ರಿಗಳನ್ನು ಉಪಯೋಗಿಸಿ, ವಾಚ್ ಟವರ್, ವೆಲ್ ಕಮ್ ಆರ್ಚ್ ಟನಲ್ಸ್, ಬರ್ಮಾ ಬ್ರಿಡ್ಜ್ ನಿರ್ಮಿಸಿದ್ದಾರೆ. ಈ ಉದ್ಯಾನವನ ಈಗ ಮಕ್ಕಳಿಗೆ ಮನರಂಜನೆ ಹಾಗೂ ದೈಹಿಕವಾಗಿ ಸದೃಢವಾಗಿರಲು ಸಹಾಯಕವಾಗಿದೆ.
ಬೆಳಗ್ಗೆ ಮತ್ತೆ ಸಂಜೆ ಪಾಲಕರು ತಮ್ಮ ಮಕ್ಕಳ ಜತೆ ಇಲ್ಲಿಗೆ ಬಂದು ತಮ್ಮ ಸಮಯ ಕಳೆಯುತ್ತಾರೆ. ರೈಲ್ವೆ ಇಲಾಖೆಯ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.