ಹುಬ್ಬಳ್ಳಿ: ನಗರದ ಈದ್ಗಾದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡುವುದು, ಬಿಡುವುದು ಮಹಾನಗರ ಪಾಲಿಕೆಗೆ ಬಿಟ್ಟ ನಿರ್ಧಾರ. ಅವರು ಏನು ನಿರ್ಧಾರ ತೆಗೆದುಕೊಳ್ತಾರೆ ಅದರ ಮೇಲೆ ಕೆಲಸ ಮಾಡುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡೋದು ನಮ್ಮ ಉದ್ದೇಶ. ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಸೇರಿ ರಾಜ್ಯದ ಮೂರು ಕಡೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೀಗಾಗಿ ಶಾಂತಿ ಸುವ್ಯವಸ್ಥೆ ದೃಷ್ಠಿಯಿಂದ ಭೇಟಿ ನೀಡಿದ್ದೇನೆ. ಈ ಬಾರಿ ಈದ್ಗಾದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೇಳಿದ್ದಾರೆ. ಪಾಲಿಕೆ ಸದನ ಸಮಿತಿ ಮಾಡಿದ್ದಾರೆ. ಸರ್ಕಾರ ಏನ್ ನಿರ್ಧಾರ ತೆಗೆದುಕೊಳ್ಳುತ್ತೋ, ಅದರ ಪ್ರಕಾರ ಕೆಲಸ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಡಿಜೆ ಬಳಸಬಾರದು. ಆದೇಶ ಮೀರಿದ್ರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.
ಎಡಿಜಿಪಿ ಭೇಟಿ, ಪರಿಶೀಲನೆ: ನಗರದ ಈದ್ಗಾ ಮೈದಾನದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿಗೆ ಇಂದು ಪಾಲಿಕೆ ಅಂತಿಮ ನಿರ್ಧಾರ ಹೊರಡಿಸಲಿದ್ದು, ಈ ಹಿನ್ನೆಲೆಯಲ್ಲಿ ಈದ್ಗಾ ಮೈದಾನಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಕಮೀಷನರ್ ಲಾಬೂರಾಮ್, ಡಿಸಿಪಿಗಳಾದ ಸಾಹೀಲ್ ಬಾಗ್ಲಾ, ಗೋಪಾಲ ಬ್ಯಾಕೋಡ್, ಎಸ್.ಪಿ ಲೋಕೇಶ ಜಗಳಾಸರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಓದಿ: ಬಿಜೆಪಿಯವರೇ ನಿಮ್ಮ ಹತ್ತಿರ ಇದೆಯಾ ಉತ್ತರ?: ಕಾಂಗ್ರೆಸ್ನಿಂದ ಅಭಿಯಾನ