ಹುಬ್ಬಳ್ಳಿ: ಈ ಬಾರಿ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಪ್ರಹ್ಲಾದ್ ಜೋಶಿ ಕೇಂದ್ರದಲ್ಲಿ ಸಚಿವರಾಗುವುದು ಖಚಿತ ಎಂದು ನಟಿ ಹಾಗೂ ಬಿಜೆಪಿ ನಾಯಕಿ ತಾರಾ ಅನುರಾಧ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ ಅವರು ಅನಂತ ಕುಮಾರ್ ಅವರ ಸ್ಥಾನ ತುಂಬಲಿದ್ದಾರೆ. ಅನಂತ ಕುಮಾರ್ ನನಗೆ ಅಣ್ಣನಂತಿದ್ದರು. ಅವರು ನನಗೆ ರಾಜಕೀಯ ಗುರು ಕೂಡ ಆಗಿದ್ದರು ಎಂದಿದ್ದಾರೆ.
ಜೋಶಿ ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿ ಅವರ ಕೆಲಸಗಳು ಜೋಶಿ ಗೆಲುವಿಗೆ ಸಹಕರಿಸಲಿವೆ. ಒಂದು ರಾಜಕೀಯ ಪಕ್ಷದವರು ಧರ್ಮ ಒಡೆಯುವ ಕೆಲಸ ಮಾಡಿತು, ಜನರ ಭಾವನೆಗೆ ಧಕ್ಕೆ ಮಾಡಿತು. ಅದ್ರೆ ಬಿಜೆಪಿ ಅಂತ ಕೆಲಸ ಯಾವತ್ತೂ ಮಾಡಿಲ್ಲ. ಅಲ್ಲದೆ ಬಿಜೆಪಿ ವಿರೋಧಿ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚಿಸಿದೆ. ಇದು ಜೋಶಿ ಗೆಲುವನ್ನು ಮತ್ತಷ್ಟು ಸುಗಮಗೊಳಿಸಲಿದೆ ಎಂದರು.
ಬಳಿಕ ಸಂಸದ ಪ್ರಹ್ಲಾದ್ ಜೋಶಿ ಪರವಾಗಿ ದೇಶಪಾಂಡೆ ನಗರದಲ್ಲಿ ಪ್ರಚಾರ ನಡೆಸಿದ ತಾರಾ, ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವಿ ಮಾಡಿದರು.