ಹುಬ್ಬಳ್ಳಿ: ಇದು ನಾನು ಹುಟ್ಟಿ ಬೆಳೆದ ನಾಡು, ನನ್ನ ಚಿಕ್ಕ ವಯಸ್ಸನ್ನು ಕಳೆದ ಊರು ಇದು. ಹುಬ್ಬಳ್ಳಿ ನನಗೆ ಸ್ವರ್ಗಕ್ಕೆ ಸಮಾನ. ಹುಬ್ಬಳ್ಳಿ ಊಟ, ಇಲ್ಲಿನ ಮಾತನ್ನು ಕೇಳ್ತಿದ್ದರೆ ನನ್ನ ಮೈಯಲ್ಲ ರೋಮಾಂಚನವಾಗುತ್ತದೆ ಎಂದು ನಟ ಶರಣ್ ಅವರು ಗಂಡು ಮಟ್ಟಿನ ನಾಡು ಹುಬ್ಬಳ್ಳಿಯನ್ನು ಹಾಡಿ ಹೊಗಳಿದ್ದಾರೆ.
ನಟ ಶರಣ್ ಅವರು ನಟನೆ ಮಾಡಿದ ಗುರು ಶಿಷ್ಯರು ಚಿತ್ರದ ಟ್ರೈಲರ್ ಲಾಂಚ್ ಮಾಡಿ ಮಾತನಾಡಿದ ಅವರು, ನಮ್ಮ ತಂದೆಯವರ ನಾಟಕ ಕಂಪನಿ ಇಲ್ಲಿಯೇ ಇತ್ತು. ರಂಗಭೂಮಿಯೇ ನನ್ನ ಜೀವ. ಇಷ್ಟೊಂದು ಹೆಸರು ಮಾಡಿದ್ದು ರಂಗಭೂಮಿಯಿಂದ ಎಂದು ಹೇಳಿದರು.
ಗುರು ಶಿಷ್ಯರು ಚಿತ್ರ ನಾನು ಇಷ್ಟಪಟ್ಟು ಮಾಡಿದ ಸಿನಿಮಾ. ಹಳೆಯ ಆಟಗಳನ್ನು ನಾವು ಮರೆಯುತ್ತಿದ್ದೇವೆ. ಆ ಆಟಗಳು ಎಷ್ಟೊಂದು ಜೋಶ್ ತರುತ್ತವೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಿದೆ. ಇದೇ ತಿಂಗಳು 23ಕ್ಕೆ ಇಡೀ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸಾಕಷ್ಟು ಜನರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಎಂದರು. ಇನ್ನು, ಶಿಷ್ಯರ ಜೊತೆ ಶರಣ್ ಅವರು ಹಾಡು ಹೇಳಿ ಸ್ಟೆಪ್ ಕೂಡ ಹಾಕಿ ಜನರನ್ನು ರಂಜಿಸಿದರು.
ನಟಿ ನಿಶ್ವಿಕಾ ಮಾತನಾಡಿ, ನಾನು ಸೂಜಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಈಗಾಗಲೇ ಚಿತ್ರದ ಹಾಡುಗಳು ಸಖತ್ ಸದ್ದು ಮಾಡುತ್ತಿದ್ದು, ಅದರಲ್ಲೂ ಆಣೆ ಮಾಡು ಹೇಳುತಿನಿ ಹಾಡು ಎಲ್ಲರ ಮನಸ್ಸಲ್ಲಿ ಉಳಿದಿದ್ದು ಸಂತಸ ತಂದಿದೆ. ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದರು.