ಹುಬ್ಬಳ್ಳಿ: ವಿಚಾರಣೆ ನೆಪದಲ್ಲಿ ಪೊಲೀಸರು ಹಲ್ಲೆ ಮಾಡಿದ್ದರಿಂದಲೇ ಮೃತಪಟ್ಟಿದ್ದಾರೆ ಎಂದು ಮೃತನ ಸಂಬಂಧಿಗಳು ಪ್ರತಿಭಟನೆ ನಡೆಸಿದ ಘಟನೆ ಶಾಂತಿನಿಕೇತನ ಕಾಲೋನಿಯಲ್ಲಿ ಜರುಗಿದೆ.
ವಿಚಾರಣೆ ನೆಪದಲ್ಲಿ ಲಕ್ಷ್ಮಣ ಇಂದರಗಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಮೃತರ ಸಂಬಂಧಿಕರು ಗುರುವಾರ ತಡರಾತ್ರಿವರೆಗೂ ಮನೆ ಬಳಿ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಹಿನ್ನೆಲೆ: ಗಣೇಶ ಮೂರ್ತಿಗಳ ಮೆರವಣಿಗೆ ಸಂದರ್ಭದಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಭರತ ಇಂದರಗಿ ಶಾಮೀಲಾಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಈತನ ತಂದೆ ಲಕ್ಷ್ಮಣ ಇಂದರಗಿ ಅವರನ್ನು ಶಹರ ಠಾಣೆ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಹೋಗಿದ್ದರು.
ನಾಲ್ಕೈದು ದಿನ ಠಾಣೆಯಲ್ಲಿಯೇ ಇಟ್ಟುಕೊಂಡು ಕೈ, ಕಾಲು, ಬೆನ್ನು, ಪಾದಕ್ಕೆ ಮನಬಂದಂತೆ ಹಲ್ಲೆ ಮಾಡಿ ಹಿಂಸೆ ಮಾಡಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದರು. ನಂತರ 10 ದಿನ ಬಂಧನದಲ್ಲಿರಿಸಿದ್ದರು. ಈ ಎಲ್ಲ ಕಾರಣದಿಂದ ಆರೋಗ್ಯ ತೀವ್ರ ಹದಗೆಟ್ಟಿತ್ತು. ನಂತರ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ನಿನ್ನೆ ಮೃತಪಟ್ಟಿದ್ದಾರೆ ಎಂದು ಮೃತನ ಸಂಬಂಧಿಗಳು ಮಾಹಿತಿ ನೀಡಿದ್ದಾರೆ.