ಹುಬ್ಬಳ್ಳಿ: ತನ್ನಲ್ಲಿರುವ ಕಲೆಯ ಮೂಲಕ ನಗರದ ಮುಸ್ಲಿಂ ಯುವತಿಯೊಬ್ಬಳು ಗಮನ ಸೆಳೆದಿದ್ದಾಳೆ. ತನ್ನನ್ನು ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡು ಧಾರ್ಮಿಕ ಸೌಹಾರ್ದತೆ ಮೆರೆದಿದ್ದಾರೆ.
ಹುಬ್ಬಳ್ಳಿಯ ಗೋಪನಕೊಪ್ಪದ ನಿವಾಸಿ ಅರುಣ ಯಾದವ ಎಂಬುವರು ಕಳೆದ 15 ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸತ್ತ ಬಂದಿದ್ದಾರೆ. ಇವರ ಬಳಿ ಸುಮನ್ ಹಾವೇರಿ ಎಂಬ ಮುಸ್ಲಿಂ ಯುವತಿ ಗಣೇಶ ವಿಗ್ರಹಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಕೆಲವು ವರ್ಷಗಳಿಂದ ಸುಮನ್ ಮನೆಯಲ್ಲಿ ಕಡುಬಡತನ ಇರುವುದರಿಂದ ಉದ್ಯೋಗ ಕೇಳಿಕೊಂಡು ಬಂದಿದ್ದರಂತೆ. ಆಗ ಅರುಣ ಅವರು ಯುವತಿಗೆ ಕೆಲಸವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಸರ್ಕಾರ ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದೆ. ಹೀಗಾಗಿ ಪೋರಬಂದರ್ನಿಂದ ಮಣ್ಣು ತರಿಸಿ ಕಾಗದದ ಮೂಲಕ ಗಣೇಶ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ಸುಮನ್ ಅವರು ವಿಘ್ನೇಶ್ವರನ ಮೂರ್ತಿ ತಯಾರಿಸುವ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ.
ಈ ಯುವತಿಯು ಕಲೆಗೆ ಯಾವುದೇ ಧಾರ್ಮಿಕ ಕಟ್ಟುಪಾಡುಗಳಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ.