ಹುಬ್ಬಳ್ಳಿ: ಆಹಾರ ಅರಸಿ ಬಂದ ಹಸುವಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಘಟನೆ ಬೈರಿದೇವರಕೊಪ್ಪದ ಬಳಿಯ ಸನಾ ಕಾಲೇಜ್ ಬಳಿ ನಡೆದಿದೆ.
ಆಹಾರ ಅರಸಿಕೊಂಡು ರಸ್ತೆಗೆ ಬಂದ ಬಿಡಾಡಿ ಹಸುವಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದಿದ್ದು, ನಂತರ ತಮಗೂ ಹಾಗೂ ಹಸುವಿಗೂ ಯಾವುದೇ ಸಂಬಂಧ ಇಲ್ಲವೆಂಬಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಹಸುವನ್ನು ಬದುಕಿಸಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಮಹೇಂದ್ರ ಎಂ, ಸಂತೋಷ, ಪ್ರಾಣಿ ಪ್ರಿಯ ಬಸವರಾಜ ಗೋಕಾವಿ ಧಾವಿಸಿದ್ದಾರೆ. ಹಸುವನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹಿತ ಸರಿಯಾದ ಸಮಯಕ್ಕೆ ವೈದ್ಯರು ಸಿಗದ ಕಾರಣ ಹಸು ಅಸುನೀಗಿದೆ.
ವೈದ್ಯರ ನಿರ್ಲಕ್ಷ್ಯ ಆರೋಪ..
ಅಪಘಾತದಲ್ಲಿ ಗಾಯಗೊಂಡಿದ್ದ ಬಿಡಾಡಿ ಹಸುವಿಗೆ ಚಿಕಿತ್ಸೆ ಕೊಡಿಸಲು ಎರಡು ಮೂರು ಪಶು ಆಸ್ಪತ್ರೆಗೆ ಹೋದರೂ ಸಮಯಕ್ಕೆ ಸರಿಯಾಗಿ ಯಾವ ವೈದ್ಯರು ಸಿಗದ ಕಾರಣ ಹಸು ಮೃತಪಡುವಂತಾಗಿದ್ದು, ಅಲ್ಲದೇ ಹಲವಾರು ಜನ ಪಶು ವೈದ್ಯರಿಗೆ ಕರೆ ಮಾಡಿದರೂ ಕೂಡಾ ಸರಿಯಾಗಿ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಪ್ರಾಣಿಗಳಿಗೆ ಅಪಘಾತವಾದಾಗಲೂ ಉಚಿತ ಸಹಾಯವಾಣಿ, ವಾಹನ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.