ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧ ಜಯ ಗಳಿಸಿದ ವ್ಯಕ್ತಿವೋರ್ವ ಎರಡು ಬಾರಿ ಪ್ಲಾಸ್ಮಾ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಹೌದು, ಅನಂತಕುಮಾರ್ ಅಚಲಕರ ಅವರಿಗೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕೊರೊನಾ ಸೋಂಕು ದೃಢಪಟ್ಟಿತ್ತು. ಆಗ ಯಾವುದಕ್ಕೂ ಧೃತಿಗೆಡದೆ ಕೊರೊನಾ ವೈರಸ್ನಿಂದ ಗುಣಮುಖರಾಗಿರುವ ಅನಂತಕುಮಾರ್ ಅವರು 15 ದಿನಗಳ ಅಂತರದಲ್ಲಿ ಎರಡು ಬಾರಿ ಪ್ಲಾಸ್ಮಾ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಂವೃಕ್ಷ ಎಂಬ ಯುವಕರ ತಂಡ ಅವಳಿನಗರದಲ್ಲಿ ಪ್ಲಾಸ್ಮಾ ದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದು, ಅವರ ಸಲಹೆಯಿಂದ ಅನಂತಕುಮಾರ್ ಅಚಲಕರ ಸೆಪ್ಟೆಂಬರ್10 ರಂದು ಹುಬ್ಬಳ್ಳಿಯಲ್ಲಿ ಪ್ಲಾಸ್ಮಾ ದಾನ ಮಾಡಿದ್ದರು. ಮೂಲತಃ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುವ ಅಚಲಕರ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂವೃಕ್ಷದಿಂದ ಪ್ರೇರಿತರಾಗಿ ಪ್ಲಾಸ್ಮಾ ದಾನಕ್ಕೆ ಮುಂದಾಗಿರುವುದಕ್ಕೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.
ವೈದ್ಯರ ಸೇವೆಯಿಂದ ನಾನು ಗುಣಮುಖನಾಗಿದ್ದೇನೆ. ಆದ್ದರಿಂದ ಸೋಂಕಿತರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮೂಲಕ ಕೊರೊನಾ ನಿಯಂತ್ರಣಕ್ಕಾಗಿ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದೇನೆ. ಅಲ್ಲದೇ ನನ್ನ ಕುಟುಂಬ ವರ್ಗದ ಸದಸ್ಯರು ಕೂಡಾ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದು, ಆದಷ್ಟು ಪ್ಲಾಸ್ಮಾ ದಾನ ಹೆಚ್ಚಾಗಬೇಕು. ಈ ದಿಸೆಯಲ್ಲಿ ಎಲ್ಲರೂ ಪ್ಲಾಸ್ಮಾ ದಾನಕ್ಕೆ ಮುಂದಾಬೇಕೆಂದು ಅವರು ಮನವಿ ಮಾಡಿದ್ದಾರೆ.
ನಗರದ ನೂರಾರು ಯುವಕರು ಸಂವೃಕ್ಷ ಎಂಬ ಹೆಸರಿನಲ್ಲಿ ಕೊರೊನಾ ಸೋಂಕಿತರ ರಕ್ಷಣೆಗೆ ನೆರವಾಗುತ್ತಿದ್ದು, ಕಳೆದ ಒಂದು ತಿಂಗಳಿಂದ ಸಂವೃಕ್ಷ ಸಂಸ್ಥೆಯಿಂದ 20 ಕ್ಕೂ ಹೆಚ್ಚು ಮಂದಿಯಿಂದ ಪ್ಲಾಸ್ಮಾ ದಾನ ಮಾಡಿಸಿ ಕೊರೊನಾ ಸೋಂಕಿತರ ಆರೋಗ್ಯ ರಕ್ಷಣೆಗೆ ನಿಂತಿರುವುದು ಶ್ಲಾಘನೀಯ.