ನವಲಗುಂದ(ಧಾರವಾಡ): ಕುಡಿದ ನಶೆಯಲ್ಲಿ ವ್ಯಕ್ತಿಯೊಬ್ಬ ಹೆಂಡತಿ ಹಾಗೂ ಮಗಳಿಗೆ ಬೆಂಕಿ ಹಚ್ಚಿದ್ದು, ಬಳಿಕ ತಾನೂ ಸುಟ್ಟುಕೊಂಡು ಆತ್ಮಹತ್ಯೆಗೆ ಶರಣಗಾಗಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿದ್ದ ಬೀರಪ್ಪ ಕಟಿಗಾರ (40 ) ತನ್ನ ಪತ್ನಿ ಫಕ್ಕೀರವ್ವ (34) ಹಾಗೂ 12 ವರ್ಷದ ಮಗಳಿಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ಬೀರಪ್ಪ ಸಹ ಬೆಂಕಿ ಹಚ್ಚಿಕೊಂಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಮೂವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಕಾರಿಯಾದೇ ಮೊದಲು ಬೀರಪ್ಪ, ಬಳಿಕ ಪತ್ನಿ ಫಕ್ಕೀರವ್ವ ಸಾವನ್ನಪ್ಪಿದ್ದಾರೆ. 12 ವರ್ಷದ ಮಗಳು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾಳೆ. ತನ್ನ ತಂದೆಯ ಕೃತ್ಯದಿಂದಾಗಿಯೇ ಬಾಲಕಿ ಅನಾಥವಾಗಿದ್ದಾಳೆ. ಗಾಯಗೊಂಡಿರುವ ಬಾಲಕಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಈ ಘಟನೆ ಕುರಿತು ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.