ಹುಬ್ಬಳ್ಳಿ: ಕೆಲಸ ಅರಸಿ ನಿತ್ಯವೂ ದೂರದೂರುಗಳಿಂದ ಕಾರ್ಮಿಕರು ನಗರ ಪ್ರದೇಶಗಳಿಗೆ ವಲಸೆ ಬರುತ್ತಾರೆ. ಹೀಗೆ ಕೆಲಸ ಅರಸಿ ಬಂದ ಕಾರ್ಮಿಕರಿಗೆ ತಕ್ಷಣವೇ ಕೆಲಸ ಸಿಕ್ಕರೂ, ಉಳಿದುಕೋಳ್ಳಲು ಸರಿಯಾದ ಸೂರು ಸಿಗುವುದಿಲ್ಲ. ಬಸ್ ನಿಲ್ದಾಣ, ಫುಟ್ಪಾತ್, ರೈಲು ನಿಲ್ದಾಣ ಹಾಗೂ ಪಾರ್ಕ್ಗಳಲ್ಲಿ ಮಲಗಿ ತೊಂದರೆ ಅನುಭವಿಸುತ್ತಾರೆ.
ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸರ್ಕಾರ ವಸತಿ ರಹಿತರ ಆಶ್ರಯ ಕೇಂದ್ರ ಸ್ಥಾಪಿಸಿದೆ. ಅವಳಿ ನಗರ ಹುಬ್ಬಳ್ಳಿಯಲ್ಲೂ ಕೂಡಾ ವಸತಿ ರಹಿತರ ಆಶ್ರಯ ಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದು, ಇದರಿಂದ ಕಾರ್ಮಿಕರ ಮುಖದಲ್ಲಿ ಮಂದಹಾಸ ಮೂಡಿದೆ. ಮಹಾನಗರ ಪಾಲಿಕೆಯ ದೀನ ದಯಾಳ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನಯಡಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ.
ಸುಪ್ರಿಂಕೋರ್ಟ್ ಆದೇಶದ ಪ್ರಕಾರ, ಒಂದು ಲಕ್ಷ ಜನರು ಇರುವ ನಗರ ಪ್ರದೇಶಗಳಲ್ಲಿ ನಗರ ಯೋಜನೆಯಡಿಯಲ್ಲಿ ವಲಸೆ ಕಾರ್ಮಿಕರಿಗಾಗಿ ತಾತ್ಕಾಲಿಕ ಆಶ್ರಯ ತಾಣ ಕಲ್ಪಿಸುವುದು ಕಡ್ಡಾಯ. ಹೊಸೂರು ಗಣೇಶ ನಿಮಜ್ಜನಾ ಬಾವಿ ಪಕ್ಕದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಭವ್ಯವಾದ ಆಶ್ರಯ ಕೇಂದ್ರ ನಿರ್ಮಾಣಗೊಂಡಿದೆ. ಇಲ್ಲಿ 46 ಕಾರ್ಮಿಕರಿಗೆ ಏಕ ಕಾಲಕ್ಕೆ ಆಶ್ರಯ ನೀಡಬಹುದಾಗಿದ್ದು, ಇದರಲ್ಲಿ 23 ಪುರುಷ ಹಾಗೂ 23 ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಬೇರೆ ಊರುಗಳಿಂದ ಕೆಲಸ ಹುಡುಕಿಕೊಂಡು ಬರುವ ಕಾರ್ಮಿಕರುವ ಮಾತ್ರ ಗರಿಷ್ಠ 6 ತಿಂಗಳು ಮಾತ್ರ ಇಲ್ಲಿ ನೆಲಸಬಹುದಾಗಿದೆ. ನಂತರ ವಸತಿ ಸೌಲಭ್ಯ ನೋಡಿಕೊಂಡು ಸ್ಥಳಾಂತರಗೊಳ್ಳಬೇಕು. ಪುರುಷ ಹಾಗೂ ಮಹಿಳಾ ಕಾರ್ಮಿಕರಿಗಾಗಿ ಪ್ರತ್ಯೇಕವಾಗಿ ವಾಸ್ತವ್ಯದ ವ್ಯವಸ್ಥೆಯಿದೆ. ಶೌಚಾಲಯ, ಅಡುಗೆ ಕೋಣೆಯಿದ್ದು ಬೇಕಾದವರು ಅಡುಗೆ ಮಾಡಿಕೊಳ್ಳಬಹುದಾಗಿದೆ. ಈ ಕಟ್ಟಡ ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದ್ದು ಕಾರ್ಮಿಕರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಯಾರು ಕಾರಣ? ಈ ಬಗ್ಗೆ ಯಾರು, ಏನಂದ್ರು? ಈ ವಿಡಿಯೋ ನೋಡಿ..