ಧಾರವಾಡ: ಪ್ರಸ್ತುತ ದಿನಮಾನದಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ಮಾಡುವುದು ಸಾಮಾನ್ಯ. ನವ ವಧು-ವರರು ಬೀಚ್, ಫಾಲ್ಸ್ ಹಾಗೂ ರೆಸಾರ್ಟ್ಗಳಲ್ಲಿ ವಿಭಿನ್ನವಾಗಿ ಫೋಟೋಗಳಿಗೆ ಪೋಸ್ ಕೊಟ್ಟು ಸಂಭ್ರಮಿಸುತ್ತಾರೆ. ಆದ್ರೆ, ಧಾರವಾಡದಲ್ಲೊಂದು ಜೋಡಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬದುಕನ್ನು ವಸ್ತುವಾಗಿರಿಸಿಕೊಂಡು ಫೋಟೋ ಶೂಟ್ ಮಾಡಿದೆ.
ಧಾರವಾಡದ ಚೇತನಾ ದೇಸಾಯಿ ಮತ್ತು ನಿಖಿಲ್ ಮಗ್ಗಾವಿ ಜೋಡಿ ವರಕವಿ ದ.ರಾ. ಬೇಂದ್ರೆ ಅವರ ಕವಿತೆಗಳನ್ನಿಟ್ಟುಕೊಂಡು ಫೋಟೋಗಳನ್ನು ತೆಗೆಸಿಕೊಂಡಿದೆ. ಆ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಈ ರೀತಿ ಫೋಟೋಶೂಟ್ ಮಾಡಿಸಿಕೊಳ್ಳಲು ಕಾರಣವಿದೆ. ವಧು ಚೇತನಾ ದೇಸಾಯಿ ಅವರು ಬೇಂದ್ರೆ ಅವರ ಮನೆಯ ಪಕ್ಕದ ಮನೆಯವರಂತೆ. ಹೀಗಾಗಿ ಸಾಹಿತ್ಯಿಕವಾಗಿ ಫೋಟೋಶೂಟ್ ಮಾಡಿಸಿಕೊಳ್ಳುವ ತವಕ ಅವರದ್ದು. ಇದೇ ಕಾರಣಕ್ಕೆ ಬೇಂದ್ರೆ ದಂಪತಿಗಳ ವೇಷಭೂಷಣದಂತೆ ಪ್ರೀ- ವೆಡ್ಡಿಂಗ್ ಶೂಟ್ ಮಾಡಿದ್ದಾರೆ.
ಇದನ್ನೂ ಓದಿ:'ಈಟಿವಿ ಭಾರತ ಇಂಪ್ಯಾಕ್ಟ್': ಬಯೋ ಮೆಡಿಕಲ್ ವೇಸ್ಟ್ ತೆರವುಗೊಳಿಸಿದ ಅಧಿಕಾರಿಗಳು
ಅತ್ಯಂತ ವಿಶಿಷ್ಟ ಸಂಗತಿ ಎಂದರೆ ಬೇಂದ್ರೆಯವರು ಬಳಸುತ್ತಿದ್ದ ಸಾಂಪ್ರದಾಯಿಕ ಟೋಪಿ, ಛತ್ರಿ ಮತ್ತು ಗ್ರಾಮೋಫೋನ್‌ಗಳನ್ನು ಚಿತ್ರೀಕರಣಕ್ಕಾಗಿ ಕುಟುಂಬದಿಂದ ಎರವಲು ಪಡೆದುಕೊಳ್ಳಲಾಗಿದೆ. ಯುವ ಆರ್ಟ್ ಸ್ಟುಡಿಯೋದ ಸಂಸ್ಥಾಪಕ ಮತ್ತು ಧಾರವಾಡದ ಛಾಯಾಗ್ರಾಹಕ ಹರ್ಷದ್ ಉದಯ್ ಕಾಮತ್ ಈ ಒಂದು ಫೋಟೋಶೂಟ್ ಮಾಡಿದ್ದಾರೆ.