ಹುಬ್ಬಳ್ಳಿ: ಸಾಮಾಜಿಕ ಜಾಲತಾಣ ಹಾಗೂ ಕೇಬಲ್ ವಾಹಿನಿಯೊಂದರ ವರದಿಗಾರ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಕೊರೊನಾ ಲಾಕ್ಡೌನ್ನಲ್ಲಿ ಕುರಿತು ಅಂತರ್ಜಾಲ ತಾಣಗಳು ಹಾಗೂ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದ ಸಂಶಿ ಗ್ರಾಮದ ಬಸವರಾಜ ಶಿವಪ್ಪ ಕ್ಯಾಲಕೊಂಡ ಎಂಬ ವ್ಯಕ್ತಿ ಇಂದು ಕುಂದಗೋಳ ತಹಶೀಲ್ದಾರರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಕ್ಷಮೆಯಾಚಿಸಿದ್ದಾರೆ.
ಏಪ್ರಿಲ್ 11ರಂದು ಸಂಶಿ ಗ್ರಾಮದಲ್ಲಿ ತರಕಾರಿ ಖರೀದಿಸುತ್ತಿದ್ದ ಜನರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ವರದಿ ಮಾಡಿದ್ದರು. ಪೊಲೀಸರಿಂದ ಲಾಠಿ ಬೀಸಿ ಎಂಬ ಶೀರ್ಷಿಕೆಯಡಿ ಕೆಲವು ವಾಹಿನಿಗಳಲ್ಲಿ ಈ ಸುದ್ದಿಯೂ ಪ್ರಸಾರವಾಗಿತ್ತು. ಈ ತಪ್ಪು ಮಾಹಿತಿ ನೀಡಿದ ಕುರಿತು ಇಂದು ಕುಂದಗೋಳ ತಾಲೂಕಿನ ದಂಡಾಧಿಕಾರಿಗಳಿಗೆ ಸ್ಥಳೀಯ ಗ್ರಾಪಂ ಅಧ್ಯಕ್ಷರು, ಪಿಡಿಒ, ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯರ ಸಮಕ್ಷಮದಲ್ಲಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಇಂತಹ ಸುಳ್ಳು ಮಾಹಿತಿಗಳನ್ನು ಇನ್ಮುಂದೆ ನೀಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.
ಇವರ ವಿರುದ್ಧ ಈಗಾಗಲೇ 2018ರಲ್ಲಿ ಐಪಿಸಿ ಸೆಕ್ಷನ್ 354ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.