ಹುಬ್ಬಳ್ಳಿ: 1930ರಲ್ಲಿ ಸ್ಥಾಪನೆಯಾಗಿರುವ ಹುಬ್ಬಳ್ಳಿಯ ಗೋಪನಕೊಪ್ಪ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಆದ್ರೆ ಶಾಲಾ ಕಟ್ಟಡದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಹಂಚುಗಳು ಕಿತ್ತು ಹೋಗಿವೆ. ಮೇಲ್ಛಾವಣಿ ಸೋರುತ್ತಿದೆ. ಈಗಲೋ ಆಗಲೋ ಬಿದ್ದು ಹೋಗುವಂತಿದೆ ಈ ಶಾಲಾ ಕಟ್ಟಡ. ಇದರಲ್ಲೇ ಮಕ್ಕಳು ಜೀವದ ಹಂಗು ತೊರೆದು ಪಾಠ ಕಲಿಯುತ್ತಿದ್ದಾರೆ.
ಅಲ್ಲದೇ ಇಂತಹ ಅವ್ಯವಸ್ಥೆ ಕಂಡರೂ ಕಾಣದಂತೆ ವೃತ್ತಿ ಜೀವನವನ್ನು ನಡೆಸುತ್ತಿರುವ ಶಿಕ್ಷಕರ ಗೋಳು ಹೇಳತೀರದು. ಬಹುಮಹಡಿ ಕಟ್ಟಡ ಕುಸಿದು ಬಿದ್ದರೂ ಕೂಡ ಶಾಲೆಯ ಅವ್ಯವಸ್ಥೆ ಬಗ್ಗೆ ಹೇಳೋರಿಲ್ಲ, ಕೇಳೋರಿಲ್ಲ. ಇನ್ನು ಕಟ್ಟಡ ಹಾಳಾಗಿರುವುದರಿಂದ ಸಂಜೆಯಾದ್ರೆ ಸಾಕು ಪುಂಡರು, ಪುಡಾರಿಗಳು ಸೇರಿಕೊಂಡು ಅನೈತಿಕ ಚಟುವಟಿಕೆ ನಡೆಸುವುದರ ಜೊತೆಗೆ ಮದ್ಯಪಾನ, ಧೂಮಪಾನ ಮಾಡ್ತಾರೆ. ಹಾಗೇ ಇಸ್ಪೀಟ್ ಆಡುತ್ತಾರೆ ಎನ್ನಲಾಗಿದೆ. ಎಲ್ಲವನ್ನೂ ಮುಂಜಾನೆ ಬಂದು ಸ್ವತಃ ಶಿಕ್ಷಕರೇ ಕ್ಲೀನ್ ಮಾಡುತ್ತಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಶಾಸಕರಿಗೆ ಶಿಕ್ಷಕರು, ಶಾಲೆಯ ಕಮಿಟಿಯ ಅಧ್ಯಕ್ಷರು ಮನವಿ ಮಾಡಿದ್ರೂ ಆಯಿತು ಮಾಡೋಣ ಅಂತಾ ಹಾರಿಕೆ ಉತ್ತರ ನೀಡುತ್ತಾಂತೆ.
ಇನ್ನು ಮಳೆಗಾಲ ಬೇರೆ ಇರೋದರಿಂದ ಶಿಥಿಲಗೊಂಡಿರುವ ಕಟ್ಟಡದ ಗೋಡೆಗಳು ಕುಸಿಯುವ ಸಂಭವ ಇದೆ. ಮಕ್ಕಳು ಅದೇ ಕಟ್ಟಡದ ಪಕ್ಕದಲ್ಲಿ ಆಟವಾಡುತ್ತಾರೆ. ಶಾಲೆಯ ಮುಂದೆ ಇರುವ ಕಾಂಪೌಂಡ್ ಸಹ ಕುಸಿಯುವ ಹಂತಕ್ಕೆ ತಲುಪಿದೆ. ಇನ್ನಾದರೂ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳು, ಶಾಸಕರು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಪೋಷಕರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.