ಧಾರವಾಡ: ಸಾಧನೆ ಮಾಡಬೇಕೆಂಬ ಛಲ ಇದ್ರೆ ಏನು ಬೇಕಾದ್ರು ಸಾಧಿಸಬಹುದು. ಅದಕ್ಕೆ ತಕ್ಕಂತೆ ನಡೆದುಕೊಂಡ ವ್ಯಕ್ತಿಯೋರ್ವ ಇದೀಗ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರು ಮುದ್ರಿಸಿದ್ದಾರೆ.
ಹೌದು, ಧಾರವಾಡದ ಕೊಪ್ಪದಕೇರಿ ನಿವಾಸಿ ಅಶೋಕ ಬಾಬರ ಎಂಬುವವರು ವಿಜಯಾ ಬ್ಯಾಂಕ್ ನಿವೃತ್ತ ನೌಕರರಾಗಿದ್ದು, ಇವರು ತಮ್ಮ ಸೇವಾ ಅವಧಿಯಲ್ಲಿ ಒಂದೇ ಒಂದು ದಿನ ರಜೆ ಪಡೆದುಕೊಳ್ಳದೇ 35 ವರ್ಷ, 1 ತಿಂಗಳು, 16 ದಿನ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ವಿವಿಧ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
ಅಶೋಕ ಬಾಬರ ಅವರು 1983 ಜೂನ್ 15ರಂದು ವಿಜಯಾ ಬ್ಯಾಂಕ್ ಅಟೆಂಡರ್ ಆಗಿ ಸೇವೆ ಆರಂಭಿಸಿ 2016 ಜುಲೈ 31ರಂದು ನಿವೃತ್ತಿ ಹೊಂದಿದ್ದಾರೆ. ಇವರು ಸುಮಾರು 35 ವರ್ಷಗಳ ಕಾಲ ಒಂದು ದಿನ ರಜಾ ತೆಗೆದುಕೊಳ್ಳದೆ ಸೇವೆ ಸಲ್ಲಿಸಿದ್ದಾರೆ.
ಇವರ ಸಾಧನೆಗೆ ಗೋಲ್ಡನ್ ಬುಕ್ ಆಫ್ ರಿಕಾರ್ಡ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಸಂಸ್ಥೆ ಕಳುಹಿಸಿಕೊಟ್ಟಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿರುವ ಹಿರಿಮೆ ಕೂಡ ಇವರದ್ದಾಗಿದೆ. ಸಮಯಕ್ಕೆ ಬೆಲೆ ಕೊಟ್ಟು ಅಷ್ಟು ವರ್ಷ ಸೇವೆ ಸಲ್ಲಿಸಿರುವ ಅಶೋಕ ಬಾಬರ ಅವರಿಗೆ ಕುಟುಂಬ ಸಹ ಸಾಥ್ ನೀಡಿದೆ.
ಒಟ್ಟಿನಲ್ಲಿ ಬ್ಯಾಂಕ್ ರಜಾ ಅವಧಿಯಲ್ಲಿ ವೈಯಕ್ತಿಕ ಕೆಲಸ ಮಾಡಿಕೊಳ್ಳುತ್ತಿದ್ದ ಅಶೋಕ ಬಾಬರ, ಸ್ವತಃ ತಮ್ಮ ತಂದೆ ತೀರಿಕೊಂಡಾಗಲು ಸೇವೆ ಸಲ್ಲಿಸಿದ್ದಾರೆ ಎನ್ನುವುದು ವಿಶೇಷ. ಪದೇ ಪದೆ ರಜೆ ಪಡೆಯುವವರಿಗೆ ಅಶೋಕ ಮಾದರಿಯಾಗಿದ್ದಾರೆ.