ಹುಬ್ಬಳ್ಳಿ: ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಕಿರು ಸಾಲ ಯೋಜನೆಯಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 9,438 ಬೀದಿಬದಿ ವ್ಯಾಪಾರಸ್ಥರಿಗೆ ತಲಾ 10 ಸಾವಿರ ರೂಪಾಯಿ ಕಿರು ಸಾಲ ನೀಡಲಾಗಿದೆ.
ಒಟ್ಟು 9,744 ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 3,034 ವ್ಯಾಪಾರಸ್ಥರಿಗೆ ಸಾಲ ಮಂಜೂರಾಗಿರುತ್ತದೆ. ಬಾಕಿ ಉಳಿದ ವ್ಯಾಪಾರಸ್ಥರಿಗೆ ಸಾಲ ಮಂಜೂರು ಪ್ರಕ್ರಿಯೆ ಚಾಲನೆಯಲ್ಲಿ ಇದ್ದು, ಬ್ಯಾಂಕುಗಳಿಗೆ ಹಣ ರವಾನಿಸಲಾಗಿದೆ. ಸಾಲದ ಅರ್ಜಿಯಲ್ಲಿ ನಮೂದಿಸಿದ ಬ್ಯಾಂಕುಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದುಕೊಳ್ಳಬಹುದು.
ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಸಾಲ ಬಿಡುಗಡೆ ಮಾಡುವ ಬ್ಯಾಂಕುಗಳಿಗೆ UPI, ID/ QR ಕೋಡ್ ಒದಗಿಸಬೇಕಾಗುತ್ತದೆ. ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ QR ಕೋಡ್ ಉಚಿತವಾಗಿ ಒದಗಿಸಲು ಪಾಲಿಕೆ ವಲಯ ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.