ಹುಬ್ಬಳ್ಳಿ: ಜಿಲ್ಲಾಡಳಿತದಿಂದ ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಹೋಟೆಲ್ ಹಾಗೂ ಲಾಡ್ಜ್ಗಳಲ್ಲಿ ಕ್ವಾರಂಟೈನ್‍ಗೆ ಒಳಪಡಿಸಿದ್ದ 63 ಜನರನ್ನು ಇಂದು ಬಿಡುಗಡೆಗೊಳಿಸಲಾಯಿತು.
ಇವರನ್ನು 14 ದಿನಗಳ ಕಾಲ ನಿಗಾದಲ್ಲಿ ಇರಿಸಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. 12ನೇ ದಿನದ ವರದಿ ನೆಗೆಟಿವ್ ಬಂದವರನ್ನು ಬಿಡುಗಡೆ ಮಾಡಲಾಗಿದೆ. ಕೆಲವರು ಸ್ವಇಚ್ಛೆಯಿಂದ ಕ್ವಾರಂಟೈನ್‍ಗೆ ಒಳಗಾಗಿದ್ದರು. ಹುಬ್ಬಳ್ಳಿ ಹಾಗೂ ಧಾರವಾಡ ಹೋಟೆಲ್ ಮಾಲೀಕರ ಸಂಘದವರು ಲಾಡ್ಜ್ಗಳನ್ನು ಕ್ವಾರಂಟೈನ್ ಸೆಂಟರ್ಗಾಗಿ ನೀಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
![ಅವಳಿನಗರದಲ್ಲಿ 63 ಜನರು ಕ್ವಾರಂಟೈನ್ ನಿಂದ ಮುಕ್ತ](https://etvbharatimages.akamaized.net/etvbharat/prod-images/kn-hbl-11-home-courantine-relise-avbbb-7208089_22042020204240_2204f_1587568360_1026.jpg)
ಕೋವಿಡ್-19 ಪಾಸಿಟಿವ್ ಇದ್ದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಅವರ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ. ರೋಗಿ ನಂಬರ್ 236 ಹಾಗೂ 363ರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಸ್ವಇಚ್ಛೆಯಿಂದ ಕ್ವಾರಂಟೈನ್‍ಗೆ ಒಳಪಡಬೇಕು ಎಂದು ಉಪ ವಿಭಾಗಧಿಕಾರಿ ಮಹಮದ್ ಜುಬೇರ್ ಹೇಳಿದರು.
ಕ್ವಾರಂಟೈನ್ ಅವಧಿ ಮುಗಿದವರನ್ನು ಜಿಲ್ಲಾಡಳಿತದಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಮನೋಬಲ ಹೆಚ್ಚಿಸಲು ಹುಬ್ಬಳ್ಳಿ ಶಹರದ ಕಾಶಿನಾಥ ಚಾಟ್ನಾ ನೀಡಿರುವ ಸಪ್ನಾ ಬುಕ್ ಹೌಸ್ನ 250 ರೂಪಾಯಿಗಳ ಗಿಫ್ಟ್ ವೋಚರ್ ನೀಡಿದ್ದಾರೆ. ಸಂಜಯ್ ಗೋಡಾವತ್‍ನ ಸ್ಟಾರ್ ಏರ್ಲೈನ್ ವತಿಯಿಂದ ಫುಡ್ ಕಿಟ್ ನೀಡಲಾಗಿದೆ ಎಂದು ಹುಬ್ಬಳ್ಳಿ ತಹಶೀಲ್ದಾರ್ ಶಶಿಧರ ಮಾಡ್ಯಾಳ ತಿಳಿಸಿದರು.
ಕ್ವಾರಂಟೈನ್ನಿಂದ ಬಿಡುಗಡೆಗೊಂಡ ವ್ಯಕ್ತಿ ಮಾತನಾಡಿ, ಮಾರ್ಚ್ 14ರಂದು ದೆಹಲಿಯ ನಿಜಾಮುದ್ದೀನ್ ಹಾಗೂ ಅಜ್ಮೀರ್ಗೆ ಭೇಟಿ ನೀಡಿದ ಹಿನ್ನೆಲೆ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಸರ್ಕಾರ ನಮ್ಮ ಆರೋಗ್ಯ ಹಾಗೂ ಕುಟುಂಬದವರ ರಕ್ಷಣೆಗಾಗಿ ಈ ಕ್ರಮ ಕೈಗೊಂಡಿದೆ. ನಮ್ಮ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದರಿಂದ ಬಿಡುಗಡೆ ಮಾಡಲಾಗಿದೆ. ಕ್ವಾರಂಟೈನ್ನಲ್ಲಿ ಇದ್ದ ನಮಗೆ ಮನೆಗಿಂತ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗಿದೆ. ಪ್ರತಿದಿನ ಉತ್ತಮ ಸಸ್ಯಾಹಾರದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ವೈದ್ಯರು ಪ್ರತಿದಿನ ನಮ್ಮ ಥರ್ಮಲ್ ಸ್ಕ್ರೀನಿಂಗ್ ನಡೆಸಿ ತಪಾಸನಣೆ ನಡೆಸುತ್ತಿದ್ದರು. ಯಾವುದೇ ಭೇದ ಭಾವ ಇಲ್ಲದೆ ಉತ್ತಮ ರೀತಿಯಲ್ಲಿ ನಮ್ಮನ್ನು ನೋಡಿಕೊಂಡಿದ್ದಾರೆ. ವೈದ್ಯರು, ನರ್ಸ್ ಹಾಗೂ ಪೊಲೀಸರು ಕೊರೊನಾ ಹೊರಾಟದಲ್ಲಿ ತಮ್ಮ ಪ್ರಾಣವನ್ನು ಪಣವಿಟ್ಟು ನಮ್ಮ ಜೀವ ಉಳಿಸಲು ಹೋರಾಡುತ್ತಿದ್ದಾರೆ. ಇವರಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.