ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿಯ ಕಿಮ್ಸ್ಗೆ ಕೋಲ್ ಇಂಡಿಯಾ ಲಿಮಿಟೆಡ್ ವತಿಯಿಂದ ಸುಮಾರು 5 ಕೋಟಿ ರೂ. ಮೌಲ್ಯದ ಹಾಗೂ ಐಒಸಿಎಲ್ ವತಿಯಿಂದ 50 ಲಕ್ಷ ರೂ. ಮೌಲ್ಯದ ಐಸಿಯು ಉಪಕರಣಗಳನ್ನು ಹಸ್ತಾಂತರಿಸಲಾಯಿತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಉಪಕರಣಗಳನ್ನು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಈ ಎರಡು ಕಂಪನಿಗಳ ಸಾಮಾಜಿಕ ಕಾರ್ಯವನ್ನು ಎಷ್ಟು ಬಣ್ಣಿಸಿದರೂ ಸಾಲದು. ಅದೇ ರೀತಿ ಉತ್ತರ ಕರ್ನಾಟಕ ಭಾಗದ ಜನರಿಗೆ ಮತ್ತಷ್ಟು ಉತ್ತಮವಾದ ಸೌಲಭ್ಯ ಸಿಗಲಿ ಎಂಬ ಉದ್ದೇಶದಿಂದ ದೇಣಿಗೆ ನೀಡಿದ್ದು, ಕಿಮ್ಸ್ ಇವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಬಡ ಜನರಿಗೆ ಸೇವೆ ನೀಡಲಿ ಎಂದರು.
ಜನವರಿ ತಿಂಗಳ ಕೊನೆಗೆ ಪೂರ್ಣ ಪ್ರಮಾಣದ ಸಂಸತ್ ಅಧಿವೇಶನ ನಡೆಸುವ ಉದ್ದೇಶ ಇದೆ. ದೇಶದಲ್ಲಿ ಶೇ. 95ರಷ್ಟು ಕೋವಿಡ್ ಸೋಂಕಿತರು ಗುಣಮುಖರಾಗಿದ್ದು, ಜನವರಿಯಲ್ಲಿ ಕೋವಿಡ್ ಲಸಿಕೆ ಬರುವ ಸಾಧ್ಯತೆ ಇದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಉಪಸ್ಥಿತರಿದ್ದರು.