ಧಾರವಾಡ: ನಗರದ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ 15 ಕೋವಿಡ್ ಪಾಸಿಟಿವ್ ಕೇಸ್ ಹಾಗೂ ಹುಬ್ಬಳ್ಳಿ ವಿದ್ಯಾನಿಕೇತನ ಕಾಲೇಜಿನಲ್ಲಿ 15 ಕೊವೀಡ್ ಕೇಸ್ ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಪ್ರಕರಣ ದಾಖಲಾದ ಹಿನ್ನೆಲೆ ಎರಡೂ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಯ ಶೇ. 70ರಷ್ಟು ಕೊವೀಡ್ ಪ್ರಕರಣ ಹುಬ್ಬಳ್ಳಿಯಲ್ಲಿ ದಾಖಲಾಗುತ್ತಿವೆ.
ಧಾರವಾಡದಿಂದ ಶೇ.20ರಷ್ಟು ಪ್ರಕರಣಗಳಿದ್ದರೆ, ಉಳಿದ ಶೇ.10ರಷ್ಟು ಕೇಸ್ ಉಳಿದ ತಾಲೂಕಿನಿಂದ ಬರುತ್ತಿವೆ. ರಜೆ ಕೊಟ್ಟ ಕಾಲೇಜುಗಳಲ್ಲಿ ತಪಾಸಣೆ ಮಾಡಲಾಗಿದೆ. ಕಾಲೇಜ್ ಆರಂಭದ ನಂತರ ಮತ್ತೆ ತಪಾಸಣೆ ಮಾಡಲಾಗುವುದು ಎಂದು ಡಿಸಿ ತಿಳಿಸಿದರು.
ಫೆಬ್ರವರಿ ಕೊನೆಯ ಹಾಗೂ ಮಾರ್ಚ್ ಮೊದಲ ವಾರದ ಅವಧಿಯಲ್ಲಿ ಇಡೀ ವರ್ಷದಲ್ಲಿಯೇ ಅತ್ಯಂತ ಕಡಿಮೆ ಅಂದರೆ ಕೇವಲ 40 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದ್ದವು. ಕಳೆದ ಮೂರು ವಾರಗಳ ಅವಧಿಯಲ್ಲಿ ಕೋವಿಡ್ ವೇಗವಾಗಿ ಹರಡುತ್ತಿದೆ. ಸಧ್ಯ ಜಿಲ್ಲೆಯಲ್ಲಿ 328 ಸಕ್ರಿಯ ಪ್ರಕರಣಗಳು ಇವೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಸೋಂಕಿತರ ಸಂಪರ್ಕ ಪತ್ತೆ, ಆಸ್ಪತ್ರೆಗೆ ಸ್ಥಳಾಂತರಿಸಲು ಆಂಬ್ಯುಲೆನ್ಸ್ ವಾಹನಗಳ ಏರ್ಪಾಡಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ತ್ವರಿತವಾಗಿ ಸ್ಪಂದಿಸಲು ಸೂಚಿಸಲಾಗಿದೆ ಎಂದಿದ್ದಾರೆ.
ಜಿಲ್ಲೆಗೆ ಪ್ರತಿದಿನ 3,000 ಜನರನ್ನು ತಪಾಸಣೆ ಮಾಡಲು ಗುರಿ ನೀಡಲಾಗಿದೆ. ಇದಕ್ಕಾಗಿ 17 ವಾಹನಗಳನ್ನು ಸಂಚಾರಿ ಸ್ವ್ಯಾಬ್ ಸಂಗ್ರಹಣೆಗೆ ನಿಯೋಜಿಸಲಾಗಿದೆ. ನಿಗದಿಪಡಿಸಿದ ಗುರಿಯನ್ನು ತಲುಪಲಾಗುತ್ತಿದೆ. ಇದುವರೆಗೆ ಒಟ್ಟು 5,08,747 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಇದುವರೆಗೆ 22,979 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 22,028 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 623 ಮಂದಿ ಮರಣ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 328 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಇದುವರೆಗೆ 1,18,89,500 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆ ನಡೆಸಲಾಗಿದೆ. ಸಭೆಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿರುವಂತೆ ಕೋವಿಡ್‍ನ ಮೊದಲ ಅಲೆಗಿಂತಲೂ 2ನೇ ಅಲೆ ವೇಗವಾಗಿ ಹರಡುತ್ತಿದೆ. ಸಾರ್ವಜನಿಕರು ಕೋವಿಡ್ ಹರಡುವಿಕೆಯನ್ನು ನಿರ್ಲಕ್ಷಿಸಿಬಾರದು. ಸರ್ಕಾರ ಸೂಚಿಸುವ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದರು.
ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 45 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಹಾಕಿಸಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಈ ಹಿಂದೆ ಕೊರೊನಾ ನಿರ್ವಹಣೆಗೆ ತೋರಿದ ಉತ್ತಮ ಕಾರ್ಯಕ್ಷಮತೆಯನ್ನು ಈಗಲೂ ಚುರುಕುಗೊಳಿಸಬೇಕು. ಕೋವಿಡ್ ತಪಾಸಣೆ ಮತ್ತು ಲಸಿಕೆ ಹಾಕಲು ಸರ್ಕಾರ ನಿಗದಿಪಡಿಸುವ ಗುರಿಯನ್ನು ಜಿಲ್ಲೆಯು ಸಾಧಿಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಕೊರೊನಾ ಅಬ್ಬರ: ಕೆಸಿ ಜನರಲ್, ಬೌರಿಂಗ್, ವಿಕ್ಟೋರಿಯಾ ಆಸ್ಪತ್ರೆಗಳ ಕೋವಿಡ್ ಹಾಸಿಗೆಗಳು ಬಹುತೇಕ ಭರ್ತಿ