ಹುಬ್ಬಳ್ಳಿ: ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ನಿಮಿತ್ತ ಸಾಲು ಸಾಲು ರಜೆ ಬಂದಿವೆ. ಹೀಗಾಗಿ, ಸಾರ್ವಜನಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ 125 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಾಕರಸಾ ಸಂಸ್ಥೆ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
![Bus stand](https://etvbharatimages.akamaized.net/etvbharat/prod-images/kn-hbl-03-deepawali-habba-hinnale-visesha-bus-vyavaste-av-ka10025_25102021194930_2510f_1635171570_120.jpg)
ಅ.31 ರಂದು ಭಾನುವಾರ, ನ. 1ರಂದು ಕನ್ನಡ ರಾಜ್ಯೋತ್ಸವ, 3ರಂದು ನರಕ ಚತುರ್ದಶಿ ಹಾಗೂ 5ರಂದು ಬಲಿ ಪಾಢ್ಯಮಿ ಹಾಗೂ 7ರಂದು ಭಾನುವಾರ ಹೀಗೆ ಸಾಲು ಸಾಲು ರಜೆಗಳಿವೆ. ಈ ಅವಧಿಯಲ್ಲಿ ದೂರದ ಸ್ಥಳಗಳಿಂದ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ನಗರಕ್ಕೆ ಮತ್ತು ಜಿಲ್ಲೆಯ ವಿವಿಧ ಸ್ಥಳಗಳ ನಡುವೆ ಹೆಚ್ಚಿನ ಜನರ ಓಡಾಟ ನಿರೀಕ್ಷಿಸಲಾಗಿದೆ.
ನಿತ್ಯ ಬಸ್ಗಳ ಜೊತೆಗೆ 125 ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ವೇಗದೂತ, ರಾಜಹಂಸ, ಸ್ಲೀಪರ್ ಹಾಗೂ ಮಲ್ಟಿ ಆ್ಯಕ್ಸಲ್ ವೋಲ್ವೊ ಸೇರಿದಂತೆ ಎಲ್ಲ ಬಗೆಯ ಬಸ್ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ.
ಹಬ್ಬಕ್ಕೆ ಹೊರ ಊರುಗಳಿಂದ ಆಗಮಿಸುವವರ ಅನುಕೂಲಕ್ಕಾಗಿ ಅ. 30 ರಂದು ಮುಂಬೈ, ಪಿಂಪ್ರಿ, ಪುಣೆ, ಪಣಜಿ, ವಾಸ್ಕೋ, ಮಡಗಾಂವ, ಬೆಂಗಳೂರು, ಮಂಗಳೂರು, ಕಲಬುರಗಿ ಮತ್ತಿತರ ದೂರದ ಊರುಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಹುಬ್ಬಳ್ಳಿಗೆ ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.
ಹಾಗೆಯೇ, ರಜೆ ಮುಗಿಸಿ ನಗರದಿಂದ ಹಿಂದಿರುಗುವವರ ಅನುಕೂಲಕ್ಕಾಗಿ ನ.7 ರಂದು ಭಾನುವಾರ ಹುಬ್ಬಳ್ಳಿಯಿಂದ ಬೆಂಗಳೂರು, ಮಂಗಳೂರು, ಕಲಬುರಗಿ, ಪುಣೆ, ಪಿಂಪ್ರಿ, ಮುಂಬೈ, ಪಣಜಿ, ವಾಸ್ಕೋ, ಮಡಗಾಂವ, ಮತ್ತಿತರ ಸ್ಥಳಗಳಿಗೆ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಮುಂಗಡ ಬುಕ್ಕಿಂಗ್, ರಿಯಾಯಿತಿ
ದೂರ ಮಾರ್ಗದ ವೇಗದೂತ ಹಾಗೂ ಎಲ್ಲ ಪ್ರತಿಷ್ಟಿತ ಸಾರಿಗೆಗಳಿಗೆ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. KSRTC ಮೊಬೈಲ್ ಆ್ಯಪ್, www.ksrtc.in ವೆಬ್ ಸೈಟ್ನಲ್ಲಿ ಆನ್ಲೈನ್ ಮೂಲಕ ಬಸ್ ನಿಲ್ದಾಣಗಳಲ್ಲಿ ಮತ್ತು ಫ್ರಾಂಚೈಸಿ ಕೌಂಟರ್ಗಳಲ್ಲಿ ಮುಂಚಿತವಾಗಿ ಆಸನಗಳನ್ನು ಕಾಯ್ದಿರಿಸಬಹುದು.
ನಾಲ್ಕು ಅಥವಾ ಹೆಚ್ಚಿನ ಆಸನಗಳನ್ನು ಒಂದೇ ಟಿಕೆಟ್ನಲ್ಲಿ ಕಾಯ್ದಿರಿಸಿದರೆ ಪ್ರಯಾಣದರದಲ್ಲಿ ಶೇಕಡಾ 5ರಷ್ಟು ರಿಯಾಯಿತಿ ಪಡೆಯಬಹುದು. ಹೋಗುವಾಗಿನ ಮತ್ತು ಬರುವಾಗಿನ ಪ್ರಯಾಣಕ್ಕೆ ಒಮ್ಮೆಗೆ ಟಿಕೆಟ್ ಮಾಡಿಸಿದರೆ ಬರುವಾಗಿನ ಪ್ರಯಾಣದ ಮೂಲ ಟಿಕೆಟ್ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಕೊನೆ ಕ್ಷಣದ ನೂಕು ನುಗ್ಗಲು ತಪ್ಪಿಸುವ ದೃಷ್ಟಿಯಿಂದ ವಿಶೇಷ ರಿಯಾಯಿತಿಯೊಂದಿಗೆ ಮುಂಗಡ ಆಸನ ಕಾಯ್ದಿರಿಸಿಕೊಳ್ಳುವುದು ಸೂಕ್ತ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.