ಹುಬ್ಬಳ್ಳಿ: ಹು-ಧಾ ಅವಳಿ ನಗರದಲ್ಲಿನ ಬಹು ದಿನಗಳ ರಸ್ತೆ ಸಮಸ್ಯೆಗೆ ಪರಿಹಾರ ಸಿಗುವುದು ನಿಶ್ಚಿತವಾಗಿದ್ದು, ಈ ಸಂಬಂಧ ಮಹಾನಗರ ಪಾಲಿಕೆ ವಿನೂತನ ನಿರ್ಧಾರಕ್ಕೆ ಮುಂದಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಬಹುತೇಕ ಮುಗಿಯತ್ತ ಬಂದರೂ ರಸ್ತೆ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಎಲ್ಲೆಂದರಲ್ಲಿ ಗುಂಡಿ ಬಿದ್ದಿರುವ ರಸ್ತೆಗಳು, ಸಂಚಾರಕ್ಕೆ ಭಯ ಹುಟ್ಟಿಸುವಂತಹ ರಸ್ತೆಗಳಿಂದ ಸಾರ್ವಜನಿಕರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಈ ಹಿನ್ನೆಲೆ ಹು-ಧಾ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ, ಸಿಆರ್ಎಫ್ ಅನುದಾನ ಹೊರತುಪಡಿಸಿ 100 ಕೋಟಿ ರೂ. ಮೊತ್ತದಲ್ಲಿ ಅವಳಿ ನಗರದ ಚರಂಡಿ ಹಾಗೂ ರಸ್ತೆ ಕಾಮಗಾರಿಗೆ ಮುಂದಾಗಿದೆ.
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ಸುಮಾರು 100 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಕ್ಕೆ ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ 38 ಕೋಟಿ ರೂ. ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಮುಂಬರುವ ದಿನಗಳಲ್ಲಿ ನೂರು ಕೋಟಿ ರೂ. ಪ್ರಸ್ತಾವನೆಗೆ ಸರ್ಕಾರ ಸಹಿ ಹಾಕಲಿದೆ.