ಹರಿಹರ : ನಿಮಗೆ ನೀವೇ ಪೊಲೀಸರಾಗಿ ಸಾರ್ವಜನಿಕರು ಮತ್ತು ಯುವಕರಿಗೆ ಮನೆಯಲ್ಲಿರಲು ಮನವಿ ಮಾಡಿ ಎಂದು ದಾವಣಗೆರೆ ಜಿಲ್ಲೆ ಗ್ರಾಮಾಂತರ ಡಿವೈಎಸ್ಪಿ ಮಂಜುನಾಥ್ ಗಂಗಲ್ ಜನರಿಗೆ ಮನವಿ ಮಾಡಿದರು. ನಗರದ ವೃತ್ತ ನಿರೀಕ್ಷಕರ ಕಚೇರಿಯ ಆವರಣದಲ್ಲಿ ಹಬ್ಬಗಳ ಕುರಿತು ವಿವಿಧ ಸಮಾಜದ ಮುಖಂಡರೊಂದಿಗೆ ಅವರು ಸಭೆ ನಡೆಸಿದರು.
ಯಾರೋ ಒಬ್ಬರು ಮಾತ್ರ ಎಚ್ಚರಿಕೆಯಿಂದಿದ್ದರೆ ಸಾಲದು, ಎಲ್ಲರೂ ಕಡ್ಡಾಯವಾಗಿ ಕಾಳಜಿ ವಹಿಸಬೇಕಾಗಿದೆ. ಕೇವಲ ಪೊಲೀಸರ ಲಾಠಿಯ ಹೆದರಿಕೆ ಶಾಶ್ವತವಲ್ಲ, ನಿಮಗೆ ನೀವೇ ಸ್ವತಃ ಅರಿತುಕೊಂಡು ಎಚ್ಚರಿಕೆ ವಹಿಸಿ. ಅಲ್ಲದೆ ಭಾರತೀಯ ದಂಡ ಸಂಹಿತೆ ಕಲಂ 269ರ ಅಡಿಯಲ್ಲಿ ಈ ಪ್ರಕರಣಗಳು ಬರುವುದರಿಂದ ಮತ್ತಷ್ಟು ಜಾಗರೂಕತೆಯಿಂದ ಇರಬೇಕು ಎಂದರು.
ದೆಹಲಿಯ ನಿಜಾಮುದ್ದೀನ್ಗೆ ಹೋಗಿದ್ದವರು ಯಾರಾದರೂ ಇದ್ದರೆ ತಕ್ಷಣ ಅಂತಹವರ ಬಗ್ಗೆ ಪೊಲೀಸರಿಗೆ ತಿಳಿಸಬೇಕು. ಹೋಗಿದ್ದವರೂ ಸಹ ಮುಜುಗರಪಟ್ಟುಕೊಳ್ಳದೆ ಆರೋಗ್ಯ ಇಲಾಖೆಗೆ ತಮ್ಮ ಮಾಹಿತಿ ನೀಡಿ ತಪಾಸಣೆ ಮಾಡಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ರೋಗ ಉಲ್ಭಣವಾಗುವುದನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಮನವಿ ಮಾಡಿದರು.
ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ತಾಲೂಕಿನಲ್ಲಿ ನಡೆದ ಕೆಲ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಲಾಕ್ ಡೌನ್ ಶಾಂತ ರೀತಿಯಿಂದ ನಡೆಯುತ್ತಿದೆ. ಇದಕ್ಕೆ ಸಹಕರಿಸುತ್ತಿರುವ ಸಾರ್ವಜನಿಕರು ಮತ್ತು ವಿವಿಧ ಇಲಾಖೆಯ ಸಿಬ್ಬಂದಿಗಳನ್ನು ಅಭಿನಂದಿಸಿದರು.