ದಾವಣಗೆರೆ: ಹೊನ್ನಾಳಿ ತಾಲೂಕಿನಲ್ಲಿ ಸಂಕಷ್ಟದಲ್ಲಿರುವವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತನ್ನ ಸ್ವಂತ ಖರ್ಚಿನಿಂದ ನಿತ್ಯವೂ 15 ಸಾವಿರ ಆಹಾರ ಕಿಟ್ ವಿತರಿಸುವುದಾಗಿ ಸುಳ್ಳು ಹೇಳಿದ್ದು, ಈ ಬಗ್ಗೆ ಚರ್ಚಿಸಲು ಪಂಥಾಹ್ವಾನ ಮಾಡಿ ಈಗ ಪಲಾಯನ ಮಾಡಿದ್ದಾರೆ ಎಂದು ಮಾಜಿ ಶಾಸಕ ಶಾಂತನಗೌಡ ಆರೋಪಿಸಿದ್ದಾರೆ.
ಹೊನ್ನಾಳಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ -19 ಹಿನ್ನೆಲೆ ಬಡವರಿಗೆ ಪ್ರತಿನಿತ್ಯ 10 ರಿಂದ 15 ಸಾವಿರ ಆಹಾರ ಕಿಟ್ ವಿತರಿಸುವುದಾಗಿ ಹೇಳಿದ್ದರು. ಮೊದಲು ಸ್ವಂತ ಖರ್ಚಿನಿಂದ ನೀಡುವುದಾಗಿ ಹೇಳಿದ್ದರು. ಈ ಬಗ್ಗೆ ಚರ್ಚಿಸಲು ತಹಶೀಲ್ದಾರ್ ಕಚೇರಿಗೆ ಬರುವಂತೆ ಕೂಡ ಹೇಳಿದ್ದರು. ಆದರೆ ಈಗ ರೇಣುಕಾಚಾರ್ಯರೇ ಬಂದಿಲ್ಲ ಎಂದರು.
ಫೋನ್-ಇನ್ ಕಾರ್ಯಕ್ರಮದಲ್ಲಿ ಜನರ ಕಷ್ಟಗಳನ್ನು ಆಲಿಸುತ್ತಾ ತಾವು ಸ್ವಂತಕ್ಕೆ 15,000 ದವಸ ದಾನ್ಯ ಕಿಟ್ ಹಾಗೂ ಪ್ರತಿದಿನ ಎರಡರಿಂದ ಮೂರು ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡುತ್ತಿರುವುದಾಗಿ ಜನರಿಗೆ ತಿಳಿಸುತ್ತಿದ್ದ ಶಾಸಕ ರೇಣುಕಾಚಾರ್ಯ ಅವರಿಗೆ ಈ ಬಗ್ಗೆ ಸವಾಲು ಹಾಕಿದ್ದೆ. ಇದಕ್ಕೆ ತಹಶೀಲ್ದಾರ್ ಕಚೇರಿಗೆ ಬನ್ನಿ ತೋರಿಸುತ್ತೇನೆಂದು ರೇಣುಕಾಚಾರ್ಯ ಹೇಳಿದ್ದರು. ಇಲ್ಲಿಗೆ ಬಂದು ಕರೆ ಮಾಡಿದರೆ ಚರ್ಚೆಗೆ ಬಾರದಿರುವುದು ಏಕೆ ಎಂದು ಶಾಂತನಗೌಡ ಪ್ರಶ್ನಿಸಿದರು.
ಕೇವಲ ಪ್ರಚಾರದ ಗೀಳು ಅಂಟಿಸಿಕೊಂಡಿರುವ ಶಾಸಕರು, ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಕೊರೊನಾ ವೈರಸ್ನಿಂದ ಜನ ತತ್ತರಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಮತ್ತು ದಾನಿಗಳಿಂದ ಪಡೆದ ಕಿಟ್ ಅನ್ನು ತಾನೇ ಸ್ವಂತ ಖರ್ಚಿನಿಂದ ಹಂಚುತ್ತಿದ್ದೇನೆ ಎಂದು ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡು ಉತ್ತರಿಸಲಾಗದೆ ಪಲಾಯನ ಮಾಡಿದ್ದಾರೆ ಎಂದು ಟೀಕಿಸಿದರು.