ದಾವಣಗೆರೆ: ಸೊಳ್ಳೆ ನಿಯಂತ್ರಣಕ್ಕೆ ಸಾರ್ವಜನಿಕರು ತಮ್ಮ ಮನೆಯ ಸುತ್ತ ಮತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದರು.
ವಿಶ್ವ ಸೊಳ್ಳೆ ದಿನಾಚರಣೆ ಅಂಗವಾಗಿ ನಗರದ ಭಾರತ್ ಕಾಲೋನಿಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತಮ್ಮ ಮನೆಯ ಸುತ್ತಲಿನ ಪರಿಸರದಲ್ಲಿರುವ ಘನತ್ಯಾಜ್ಯ ವಸ್ತುಗಳಲ್ಲಿ ನೀರು ಶೇಖರಣೆ ಆಗದಂತೆ ಜಾಗ್ರತೆ ವಹಿಸುವಂತೆ ತಿಳಿಸಿದರು. ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಡೆಂಗ್ಯೂ ಜ್ವರ, ಚಿಕನ್ ಗುನ್ಯಾ ರೋಗಗಳನ್ನು ಹರಡುವ ಸೊಳ್ಳೆಗಳು ಹೆಚ್ಚಾಗಿ ನೀರಿನಲ್ಲಿ ಹುಟ್ಟುವುದರಿಂದ ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ತಮ್ಮ ಮನೆಯ ನೀರಿನ ಎಲ್ಲಾ ಪರಿಕರಗಳನ್ನು ಕನಿಷ್ಟ ವಾರಕ್ಕೊಮ್ಮೆ ಚೆನ್ನಾಗಿ ತೊಳೆದು ನೀರು ತುಂಬಿ ಭದ್ರವಾಗಿ ಮುಚ್ಚಿಡಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಮಾತನಾಡಿ, ವಿಶ್ವ ಸೊಳ್ಳೆ ದಿನಾಚರಣೆಯನ್ನು ಪ್ರತಿ ವರ್ಷವೂ ಆಚರಿಸಲಾಗುತ್ತಿದೆ. ವಿವಿಧ ಜಾತಿಯ ಸೊಳ್ಳೆಗಳ ಬಗ್ಗೆ, ಅವುಗಳ ಉತ್ಪತ್ತಿ ತಾಣಗಳ ಬಗ್ಗೆ ಹಾಗೂ ನಿಯಂತ್ರಣದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮುಖ್ಯ ಉದ್ದೇಶ ಇದು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಎಚ್. ಉಮಾಪತಿ ಮಾತನಾಡಿ, ಸೊಳ್ಳೆಗಳ ನಿಯಂತ್ರಣದ ಜೊತೆಗೆ ಈ ವರ್ಷ ಹರಡಿರುವಂತಹ ಕೊರೊನಾ ರೋಗದ ಬಗ್ಗೆಯು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸುವುದು, ಜನಸಂದಣಿ ಪ್ರದೇಶಗಳಲ್ಲಿ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಆಗಾಗ ಕೈಗಳನ್ನು ತೊಳೆಯಬೇಕು. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದರಿಂದ ಕೊರೊನಾ ಹೋಗಲಾಡಿಸಬಹುದು ಎಂದರು. ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಕಾಯಿಲೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರು ಇನ್ನಷ್ಟು ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದರು.