ದಾವಣಗೆರೆ: ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿ ತನ್ನ ಪತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಇಲ್ಲಿನ ವಿದ್ಯಾನಗರ ಪೊಲೀಸರು ಸೆರೆ ಹಿಡಿದಿದ್ದಾರೆ. ದಾವಣಗೆರೆ ನಗರದ ಹಗೆದಿಬ್ಬ ವೃತ್ತದ ಸಮೀಪದ ಬುದ್ಧಬಸವ ನಗರದ ನಿವಾಸಿಯಾಗಿರುವ ಶ್ವೇತಾ (28) ಹಾಗೂ ಚಂದ್ರಶೇಖರ್ (29) ಬಂಧಿತರು. ಮಹಾಂತೇಶ (35) ಎಂಬ ವ್ಯಕ್ತಿಯನ್ನು ಇದೇ ತಿಂಗಳು 23 ರಂದು ದಾವಣಗೆರೆ ರಿಂಗ್ ರಸ್ತೆಯಲ್ಲಿ ಕತ್ತು ಕೊಯ್ದು, ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ಹೊಯ್ಸಳ ವಾಹನದ ಸಿಬ್ಬಂದಿ ಇನ್ನೂ ಉಸಿರಾಡುತ್ತಿದ್ದ ಮಹಾಂತೇಶ್‌ರನ್ನು ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿದ್ದರು. ಆದ್ರೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ಮೃತವ್ಯಕ್ತಿಯ ಬೆರಳು ಮುದ್ರೆಯ ಸಹಾಯದಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಮಹಾಂತೇಶ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಬೈಚವಳ್ಳಿ ಗ್ರಾಮದ ನಿವಾಸಿ ಎಂದು ಗೊತ್ತಾಗಿತ್ತು. ತನಿಖೆ ಮುಂದುವರೆಸಿದ ಪೊಲೀಸ್ ತಂಡ ಇದೀಗ ಶ್ವೇತಾ ಹಾಗೂ ಪ್ರಿಯಕರ ಚಂದ್ರಶೇಖರ್ ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿಗಳಿಂದ ಕೊಲೆಗೆ ಬಳಸಿದ್ದ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ 2 ದ್ವಿಚಕ್ರ ವಾಹನಗಳು, 2 ಮೊಬೈಲ್ ಫೋನ್, 1 ಚಾಕು, ಬಿಯರ್ ಬಾಟಲ್ ಹಾಗು ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಶ್ವೇತಾ ಹಾಗು ಚಂದ್ರಶೇಖರ್ ಇಬ್ಬರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ರಾತ್ರಿ ವೇಳೆ ಮಹಾಂತೇಶರನ್ನು ಕರೆದುಕೊಂಡು ಹೋಗಿದ್ದ ಇಬ್ಬರು ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಂದು ಹಾಕಿದ್ದಾರೆ. ಆರೋಪಿ ಚಂದ್ರಶೇಖರ ಶವದ ಮೇಲೆ ಖಾರದಪುಡಿ ಹಾಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕುತ್ತಿಗೆ ಕತ್ತರಿಸಿದ್ದ ವಿಚಾರ ತನಿಖೆಯಿಂದ ಗೊತ್ತಾಗಿದೆ.
ಮಹಾಂತೇಶ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ನಿವಾಸಿಯಾಗಿದ್ದು, ದಾವಣಗೆರೆಯಲ್ಲಿ ವಿವಾಹವಾಗಿದ್ದರು. ಕಟಿಂಗ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಅವಳಿ ಮಕ್ಕಳಿದ್ದಾರೆ. ಚಂದ್ರಶೇಖರ ಮಹಾಂತೇಶ ಅವರ ಬಾಲ್ಯಸ್ನೇಹಿತನಾಗಿದ್ದ. ಚಂದ್ರಶೇಖರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದು ಪತ್ನಿ ಸೌಮ್ಯ ವಕೀಲರೊಬ್ಬರ ಕಚೇರಿಯಲ್ಲಿ ಸಹಾಯಕಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಪತ್ನಿ ಮೇಲೆ ಹಲ್ಲೆಗೈದ ಪತಿ ಅರೆಸ್ಟ್
ಇತ್ತೀಚಿನ ಅಪರಾಧ ಪ್ರಕರಣ: ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ಯುವಕನೋರ್ವನಿಗೆ ಖಾರದ ಪುಡಿ ಎರಚಿ, ಕುತ್ತಿಗೆ ಕೊಯ್ದು, ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಸುಮಾರು 25 ರಿಂದ 30 ವರ್ಷದೊಳಗಿನ ಯುವಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ನಗರದ ಶಾಮನೂರು ರಸ್ತೆಯ ಬಾರ್ವೊಂದರ ಸಮೀಪ ಘಟನೆ ನಡೆದಿತ್ತು.
ಇದನ್ನೂ ಓದಿ: ಶಾಲೆಯಿಂದ ಮಗನನ್ನು ಕರೆತಂದು ಭಿಕ್ಷೆ ಬೇಡಲು ಬಿಟ್ಟಿದ್ದ ಅಪ್ಪ.. ರಾತ್ರಿ ಮನೆಗೆ ಬಂದಾಗ ಮಗನನ್ನು ಇರಿದು ಕೊಂದ ತಂದೆ