ದಾವಣಗೆರೆ : ಮುಂದಿನ ಚುನಾವಣೆಯನ್ನು ಹೇಗೆ ಗೆಲ್ಲಬೇಕು ಎನ್ನುವುದರ ಬಗ್ಗೆ ರೂಪುರೇಷೆ ಸಿದ್ಧಪಡಿಸ್ತೇವೆ. ಬರುವ ದಿನಗಳಲ್ಲಿ ಸಂಘಟನೆಯನ್ನು ಶಕ್ತಿಶಾಲಿಯನ್ನಾಗಿ ಮಾಡುವುದಕ್ಕೆ ಸಿದ್ಧತೆ ಮಾಡ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯಲು ಸಿದ್ಧತೆ ಮಾಡ್ತೇವೆ. ಈವರೆಗೂ ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿಲ್ಲ. ಈ ಬಾರಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ. ಪಂಚಾಯತ್ ಡಿಲಿಮಿಟೇಷನ್ ಸರಿ ಇಲ್ಲ ಎಂದು ಕಾಂಗ್ರೆಸ್ ಅನೇಕ ಮಿತ್ರರು ಖಾಸಗಿಯಾಗಿ ಬಂದು ಹೇಳಿದ್ದರು. ಡಿಲಿಮಿಟೇಷನ್ ಸರಿ ಆಗಬೇಕು ಅನ್ನೋದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು.
ಬೆಲೆ ಏರಿಕೆ-ಇಳಿಕೆ ಸ್ವಾಭಾವಿಕ : ಚುನಾವಣೆ ಬಂದ ಸಂದರ್ಭದಲ್ಲಿ ಜನ ಬುದ್ಧಿ ಕಲಿಸುತ್ತಾರೆ ಎಂದು ಕಾಂಗ್ರೆಸ್ ಹೇಳಿದೆ. ಬೆಲೆ ಏರಿಕೆ ಇದ್ದಾಗಲೂ ಚುನಾವಣೆ ಬಂದಿದೆ. ಮೂರು ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಬೆಲೆ ಏರಿಕೆ-ಇಳಿಕೆ ಸ್ವಾಭಾವಿಕವಾದ ಪ್ರಕ್ರಿಯೆ. ಇದನ್ನು ಹೇಗೆ ಕಂಟ್ರೋಲ್ ಮಾಡಬೇಕು ಎಂದು ಕೇಂದ್ರ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ದೇವಸ್ಥಾನದ ಮೇಲೆ ಸಿದ್ದರಾಮಯ್ಯಂಗೆ ಪ್ರೀತಿ ಹೆಚ್ಚಾಗಿದೆ : ಸಿದ್ದರಾಮಯ್ಯನವರು ನಾಸ್ತಿಕರು, ಇತ್ತೀಚೆಗೆ ದೇವಸ್ಥಾನದ ಮೇಲೆ ಪ್ರೀತಿ ಹೆಚ್ಚಾಗಿದೆ. ಯಾರು ಎಷ್ಟೇ ನಾಸ್ತಿಕರು ಅಂದ್ರೂ ಇವತ್ತಲ್ಲ ನಾಳೆ ದೇವರಿಗೆ ಬೆಲೆ ಕೊಡಲೇಬೇಕು. ಅವರ ಹೇಳಿಕೆಗಳು ಹೇಳಿಕೆಗಷ್ಟೇ ಸೀಮಿತ, ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷ ನಾವು ನಾಸ್ತಿಕರು ಅಂತಾ ಗಟ್ಟಿಯಾಗಿ ಹೇಳ್ತಿದ್ದರು. ಆದರೆ, ಹಣೆಗೆ ಕುಂಕುಮ ಇಟ್ಟುಕೊಂಡು ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದರು. ಸಿದ್ಧಾಂತಕ್ಕೂ ಆಚರಣೆಗೂ ಸಂಬಂಧ ಇಲ್ಲ. ದೇವಸ್ಥಾನಗಳು ಭಾರತದ ಸಂಸ್ಕೃತಿಯ ಪ್ರತೀಕ ಎಂದರು.
ಇದನ್ನೂ ಓದಿ: ಚಿಕ್ಕೋಡಿ : ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾವು ; ಕೊಲೆ ಆರೋಪ