ದಾವಣಗೆರೆ: ದೇವಸ್ಥಾನ ತೆರವು ಮಾಡಿರುವ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡುತ್ತೇವೆ. ಹಿಂದೂಗಳ ಭಾವನೆಗೆ ಧಕ್ಕೆ ಬಾರದಂತೆ ಕಾನೂನುಗಳನ್ನು ತರುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದರು.
ಸುಪ್ರಿಂಕೋರ್ಟ್ ಆದೇಶದಂತೆ ದೇಗುಲಗಳನ್ನು ತೆರವು ಮಾಡುತ್ತಿರುವ ಕೆಲಸವನ್ನು ಕೂಡಲೇ ನಿಲ್ಲಿಸಬೇಕು. ಕೆಡವಿರುವ ದೇವಸ್ಥಾನಗಳನ್ನು ಮತ್ತೆ ಸ್ಥಾಪನೆ ಮಾಡಬೇಕಾಗಿದೆ. ಈ ವಿಚಾರವಾಗಿ ಕಾನೂನಾತ್ಮಕವಾಗಿ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬಿಹಾರ ರಾಜ್ಯದಲ್ಲಿ ಕೂಡ ದೇವಾಲಯಗಳ ಬಗ್ಗೆ ಕೆಲವು ಕಾನೂನು ಬದಲಾವಣೆ ಮಾಡಿದ್ದಾರೆ. ಹಾಗೆಯೇ ರಾಜ್ಯದಲ್ಲೂ ಕೂಡ ಕೆಲವೊಂದು ಕಾನೂನು ಬದಲಾವಣೆ ಮಾಡಿ ಪೂಜಾ ಸ್ಥಳಗಳನ್ನು ಉಳಿಸುವ ಹಾಗೂ ಸ್ಥಳಾಂತರ ಮಾಡಲು ಕಂದಾಯ ಇಲಾಖೆಯಿಂದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
'ಬಿಜೆಪಿಗೆ ಬರುವವರ ಪಟ್ಟಿ ಕೇಂದ್ರಕ್ಕೆ ಕಳುಹಿಸಿದ್ದೇವೆ':
ಇನ್ನೊಂದು ತಿಂಗಳೊಳಗೆ ಬಿಜೆಪಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅನೇಕ ನಾಯಕರು ಸೇರುತ್ತಾರೆ. ಬಹಳಷ್ಟು ಮುಖಂಡರನ್ನು ಸೇರಿಸಿಕೊಳ್ಳಲು ಅನುಮತಿ ಕೇಳಿ ಕೇಂದ್ರಕ್ಕೆ ಪಟ್ಟಿ ನೀಡಿದ್ದು, ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ, ಮುಂಬರುವ ಜಿಲ್ಲಾ ಪಂಚಾಯಿತಿ, ಎರಡು ಉಪಚುನಾವಣೆ, 25 ಎಮ್ಎಲ್ಸಿ ಚುನಾವಣೆಗಳಿಗೆ ತಯಾರಿ ಮಾಡಿಕೊಳ್ಳಬೇಕೆಂದರು.