ದಾವಣಗೆರೆ: ಪುಲ್ವಾಮಾ ದಾಳಿ ಬಳಿಕ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಿದ್ದೇವೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆ ಸಭೆ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮಗೆ ಯಾವುದೇ ಸೂಚನೆ ಕೊಟ್ಟಿಲ್ಲ. ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಸಹಜವಾಗಿಯೇ ಅಲರ್ಟ್ ಆಗಿರುತ್ತೇವೆ ಎಂದು ಹೇಳಿದರು.
ಆಂತರಿಕ ಭದ್ರತೆ ಮತ್ತು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆಯಾ ಎಂಬ ಪ್ರಶ್ನೆಗೆ ಇದೊಂದು ಸೂಕ್ಷ್ಮ ವಿಚಾರ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿಯಲ್ಲಿ ಉದ್ವಿಗ್ನ ವಾತಾವರಣ ಇದೆ. ಪಾಕ್ನ ಉಗ್ರರ ಅಡಗುತಾಣಗಳ ಮೇಲೆ ವಾಯುಸೇನೆ ದಾಳಿಯಾಗಿದೆ. ಹಾಗಾಗಿ ಸಹಜವಾಗಿಯೇ ಅಲರ್ಟ್ ಆಗಿರುತ್ತೇವೆ ಎಂದು ತಿಳಿಸಿದ್ದಾರೆ.
ಕೇಂದ್ರ ಮುಖ್ಯ ಕಾರ್ಯದರ್ಶಿಯವರು ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ಡ್ಯಾಂಗಳು, ಥರ್ಮಲ್ ಸ್ಟೇಷನ್, ರೈಲ್ವೆ ನಿಲ್ದಾಣ ಸೇರಿದಂತೆ ಆಯಾಯ ಇಲಾಖೆಗಳೂ ಸಹ ಜಾಗ್ರತೆ ವಹಿಸುತ್ತವೆ. ಇದರಲ್ಲಿ ಎಲ್ಲರ ಸಂಘಟಿತ ಪ್ರಯತ್ನ ಅಗತ್ಯ. ಹಾಗಾಗಿ ನಾವು ಅಲರ್ಟ್ ಆಗಿದ್ದೇವೆ ಎಂದಿದ್ದಾರೆ.