ದಾವಣಗೆರೆ: ಹಣ ಕಸಿದು ವಾಹನ ಸವಾರರಿಗೆ ತೊಂದರೆ ಕೊಟ್ಟಿರುವ ಕುರಿತು ದೂರು ದಾಖಲಾದ ಬೆನ್ನಲ್ಲೇ ಬಂಧಿಸಲಾದ 16 ಜನರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಠಾಣೆಗೆ ನುಗ್ಗಲು ಯತ್ನಿಸಿದ ಗುಂಪಿನ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದ್ರೆ ಈ ಆರೋಪವನ್ನು ಜಗಳೂರು ಪೊಲೀಸ್ ಇನ್ಸ್ಪೆಕ್ಟರ್ ತಳ್ಳಿ ಹಾಕಿದ್ದಾರೆ.
ನಡೆದಿದ್ದೇನು?: ಜಿಲ್ಲೆಯ ಜಗಳೂರಿನಲ್ಲಿ ದೊಡ್ಡ ಮಾರಮ್ಮನ ಜಾತ್ರೆ ಸಂಬಂಧ ಪ್ರಾಣಿ ಬಲಿ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಇದರಿಂದ ಆಕ್ರೋಶಗೊಂಡ ಮೂವತ್ತು ಯುವಕರ ತಂಡ, ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲಿ ಮೊನ್ನೆ (ಮಂಗಳವಾರ) ರಾತ್ರಿ ಬಂದ ವಾಹನಗಳನ್ನು ತಡೆದು ಹಣ ಕಸಿಯವುದು, ಕೀ ಕಸಿದುಕೊಂಡು ತೊಂದರೆ ನೀಡುವುದು ಹಾಗೂ ವಾಹನಗಳಿಗೆ ಹಾನಿ ಮಾಡಿದ್ದ ಕೆಲ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ವಶಕ್ಕೆ ಪಡೆದ ಯುವಕರನ್ನು ಕರೆತಂದು ಠಾಣೆಯಲ್ಲಿರಿಸಲಾಗಿತ್ತು. ಹೀಗಾಗಿ, ಅನಗತ್ಯವಾಗಿ ನಮ್ಮ ಮಕ್ಕಳನ್ನ ಏಕೆ ಕರೆತರಲಾಗಿದೆ ಎಂದು ಪ್ರಶ್ನೆ ಮಾಡಿದ ಪೋಷಕರು ಹಾಗೂ ಸಂಬಂಧಿಕರು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಠಾಣೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಲಾಠಿ ಬೀಸಿ ನೆರೆದಿದ್ದವರನ್ನು ಚದುರಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಲಾಠಿ ಏಟಿನಿಂದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪೆಟ್ಟು ಬಿದ್ದಿದೆ ಎಂದು ಯುವಕರ ಸಂಬಂಧಿಕರು ಆರೋಪ ಮಾಡಿದ್ದಾರೆ. ಜೊತೆಗೆ, ಯುವಕ ಹಾಗೂ ಮಹಿಳೆಯನ್ನು ಪೊಲೀಸ್ ಠಾಣೆ ಒಳಗೆ ಎಳೆದುಕೊಂಡು ಹೋದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಹಾಗೂ ಈ ರೀತಿಯ ಪೊಲೀಸರ ವರ್ತನೆ ವಿರುದ್ಧ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪಿಸ್ತೂಲ್ ಹಿಡಿದು ದಿಢೀರ್ ಶಾಲೆಗೆ ನುಗ್ಗಿದ ವ್ಯಕ್ತಿ.. ಮುಂದಾಗಿದ್ದೇನು?
ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್ ಹೇಳಿದ್ದೇನು?: "ಈಟಿವಿ ಭಾರತ"ದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಜಗಳೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ರೀಧರ್, "ಮಾರಮ್ಮನ ಜಾತ್ರೆ ವೇಳೆ ಪ್ರಾಣಿ ಬಲಿ ನಿಷೇಧ ಮಾಡಿದ್ದರಿಂದ ಆಕ್ರೋಶಗೊಂಡು ಯುವಕರ ತಂಡ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಕಂಡ ಕಂಡ ವಾಹನಗಳನ್ನು ನಿಲ್ಲಿಸಿ, ಪ್ರಯಾಣ ಮಾಡುವವರ ಬಳಿ ಹಣ ಕಸಿದುಕೊಂಡು ತೊಂದರೆ ನೀಡ್ತಿದ್ದರು ಎಂದರು.
ಅಷ್ಟೇ ಅಲ್ಲ ಆ ಯುವಕರು ಕಾರು ಮತ್ತು ಗೂಡ್ಸ್ ವಾಹನಗಳ ಕೀ ಕಸಿದು ಹಣ ಲಪಾಟಾಯಿಸಿದ್ದಾರೆ. ಹಲ್ಲೆಗೊಳಗಾದ ವಾಹನ ಚಾಲಕನ ಬಳಿ ಹಲ್ಲೆ ಮಾಡಿದ ಯುವಕರು ದೂರವಾಣಿ ನಂಬರ್ ನೀಡಿ ಏನು ಮಾಡಿಕೊಳ್ತೀರಾ ಮಾಡಿಕೊಳ್ಳಿ ಎಂದು ಅವಾಜ್ ಹಾಕಿದ್ದಾರೆ. ಹಾಗೆಯೇ, ಮಹಿಳಾ ವಕೀಲರೊಬ್ಬರಿಗೂ ಇದೇ ರೀತಿ ತೊಂದರೆ ನೀಡಿದ ಕಾರಣ ಅವರು ಠಾಣೆಗೆ ಬಂದು ದೂರು ನೀಡಿದ್ದರು. ಯುವಕರು ನೀಡಿದ್ದ ದೂರವಾಣಿ ಸಂಖ್ಯೆ ಆಧರಿಸಿ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ. ಇವರನ್ನು ಬಿಡುವಂತೆ ಸಂಬಂಧಿಕರು ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಅವರ ಮೇಲೆ ಹಲ್ಲೆ ಮಾಡಿಲ್ಲ, ಬದಲಿಗೆ ಹಿಮ್ಮೆಟ್ಟಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಉನ್ನತ ಅಧಿಕಾರಿಗಳು ಈ ಘಟನೆ ಕುರಿತು ಯಾವರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕಾದು ನೋಡ್ಬೇಕಾಗಿದೆ.
ಇದನ್ನೂ ಓದಿ : ಪೆರೋಲ್ ಅವಧಿ ಮುಕ್ತಾಯ: ಮತ್ತೆ ಜೈಲು ಸೇರಿದ ಬಿಹಾರದ ಮಾಜಿ ಸಂಸದ ಆನಂದ್ ಮೋಹನ್