ದಾವಣಗೆರೆ: ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡಿದ್ದಾರೆಂದು ಆರೋಪಿಸಿ ಅಧಿಕಾರಿಯೊಬ್ಬರು ಶಾಸಕ ಎಂಪಿ ರೇಣುಕಾಚಾರ್ಯ ವಿರುದ್ಧ ನ್ಯಾಯಾಲಯದ ಮೂಲಕ ಪ್ರಕರಣ ದಾಖಲು ಮಾಡಿಸಿದ್ದಾರೆ. ಈ ಬಗ್ಗೆ ನ್ಯಾಮತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸದ ಕಾರಣ ಅಧಿಕಾರಿಯು ಕೋರ್ಟ್ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯದ ಮೂಲಕ ರೇಣುಕಾಚಾರ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನ್ಯಾಮತಿ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿ ಆಗಿದ್ದ ಪ್ರಶಾಂತ್ ಎಂಬುವರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 186 ಅಡಿ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ಕೋರ್ಟ್ ಮೊರೆ ಹೋಗಿದ್ದರು.
ಆದರೆ ದೂರು ದಾಖಲಾದ ಬಳಿಕ ಆಧಿಕಾರಿ ಪ್ರಶಾಂತ್ರನ್ನು ದಿಢೀರ್ ಚನ್ನಗಿರಿ ತಾಲೂಕಿನ ನಲ್ಲೂರಿಗೆ ವರ್ಗಾವಣೆ ಮಾಡಲಾಗಿದೆ. ಇದನ್ನು ಖಂಡಿಸಿ ವಿವಿಧ ಸಂಘಟನೆಯವರು ಶಾಸಕರ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಯನ್ನು ಪುನಃ ಈ ಮುನ್ನ ಕಾರ್ಯ ನಿರ್ವಹಿಸುತ್ತಿದ್ದ ಕುಂಕುವಾ ವೃತ್ತಕ್ಕೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಕಾರಣ?: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನ್ಯಾಮತಿ ತಾಲೂಕಿನಲ್ಲಿಯೂ ಹಲವೆಡೆ ಹಾನಿ ಉಂಟಾಗಿದೆ. ಈ ಬಗ್ಗೆ ಕೋಗನಹಳ್ಳಿ ಗ್ರಾಮದಲ್ಲಿ ಹಾನಿಗೊಳಗಾದ ಮನೆಗಳ ಸರ್ವೇ ನಡೆದಿತ್ತು. ಈ ವಿಚಾರ ಸಂಬಂಧ ಶಾಸಕರು ಹೇಳಿದಂತೆ ಗ್ರೇಡ್ ಹಾಕುವಂತೆ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್ಗೆ ರೇಣುಕಾಚಾರ್ಯ ತಾಕೀತು ಮಾಡಿದ್ದಾರಂತೆ. ಆದರೆ ಯಾವುದೇ ಕಾರಣಕ್ಕೂ ಮನೆ ಹಾನಿ ವರದಿ ಬದಲಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಮನೆಗೆ ಕರೆದು ಸಾರ್ವಜನಿಕವಾಗಿ ನಿಂದನೆ ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡಿದ್ದಾರೆ ಎಂದು ದೂರಿನಲ್ಲಿ ಪ್ರಶಾಂತ್ ಉಲ್ಲೇಖಿಸಿದ್ದಾರೆ.
ಅದರೆ ಶಾಸಕರು ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆಂದು ಅಧಿಕಾರಿಯು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ದಾಖಲಿಸಿಲ್ಲ ಎಂದು ಬಳಿಕ ಕೋರ್ಟ್ ಮೊರೆ ಹೋಗಿದ್ದರು. ಬಳಿಕ ಕೋರ್ಟ್ ಆದೇಶದಂತೆ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಮನೆಮಂದಿ ಇದ್ದಾಗಲೇ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ