ದಾವಣಗೆರೆ : ನಮಗೆ ಎಷ್ಟೇ ಮನೆ ದೇವರು ಇದ್ದರೂ ಅವರನ್ನು ಪೂಜಿಸುತ್ತೇವೆಯೋ ಇಲ್ಲವೋ.. ಅದೇ ರೀತಿ ನಮ್ಮ ಸಮಾಜಕ್ಕೆ ಎರಡು ಪೀಠಗಳು ಇದ್ದರೂ ನಾವು ಮೀಸಲಾತಿಗಾಗಿ ಒಂದಾಗಿರ್ತೀವಿ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶಗೊಂಡಿದ್ದಾರೆ.
ಪಂಚಮಸಾಲಿ ಸಮಾಜವನ್ನು 2ಎ ಸೇರ್ಪಡೆಗೆ ಒತ್ತಾಯಿಸಿ ನಗರದಲ್ಲಿ ನಡೆದ ಪಾದಯಾತ್ರೆಯ ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ಹತ್ತು ಪೀಠಗಳಾಗಲಿ ಅಭ್ಯಂತರ ಇಲ್ಲ. ಆದರೆ, ನಾವು 2ಎ ಮೀಸಲಾತಿ ಹೋರಾಟ ಮಾಡೋದು ಮಾತ್ರ ನಿಲ್ಲಿಸುವುದಿಲ್ಲ.
2ಎ ಮೀಸಲಾತಿಗಾಗಿ ಹೋರಾಟ ಮಾಡಿ ಯಶಸ್ವಿಯಾಗಿ ಎರಡು ಪೀಠಗಳಾಗಿ ಒಡೆದ ಸಮಾಜಕ್ಕೆ ಪಾಠ ಕಲಿಸೋಣ ಎಂದು ಹರಿಹರದಲ್ಲಿರುವ ಪಂಚಮಸಾಲಿ ಮಠ ನಿರ್ಮಾಣ ಮಾಡಿದವರಿಗೆ ಸಂದೇಶ ರವಾನಿಸಿದರು. ಈ ಪಾದಯಾತ್ರೆ ಪಂಚಮಸಾಲಿ ಸಮಾಜ ಶಕ್ತಿ ಪ್ರದರ್ಶನದ ಸಂಕೇತವಾಗಬೇಕಾಗಿದೆ.
ಹತ್ತು ಜನ ಪೂಜ್ಯರಾದರೂ ಮೀಸಲಾತಿಗಾಗಿ ಒಂದೇ ಸಂಘಟನೆ ಇರಬೇಕು. ಈ ಮೀಸಲಾತಿ ಹೋರಾಟಕ್ಕೆ ಎಷ್ಟೇ ಒತ್ತಡ ಬಂದ್ರೂ ಹೋರಾಟ ಮಾತ್ರ ಕೈ ಬಿಡುವುದಿಲ್ಲ. ಯಡಿಯೂರಪ್ಪನವರು ಲಿಂಗಾಯತರ ಹೀರೊ ಆಗ್ತಾರೆಂದು, ಕೇಂದ್ರದವರು ಈ ಮೀಸಲಾತಿ ತಡೆಗಟ್ಟಿದ್ದಾರೆ. ಅವರನ್ನು ರಾಜ್ಯದ ಲಿಂಗಾಯತ ನಾಯಕ ಎಂದು ಗುರುತಿಸಿದೆ. ಬಿಎಸ್ವೈ ಅವರು ಕೊಟ್ಟ ಮಾತಿಗೆ ತಪ್ಪಿದವರಲ್ಲ. ನಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ ಎಂದರು.