ದಾವಣಗೆರೆ: ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆ ಶಾಪದಿಂದ ಮಾಜಿ ಸಿಎಂ ಬಿಎಸ್‌ವೈ ಅಧಿಕಾರ ಕಳೆದುಕೊಂಡರು ಎಂದು ಮಾಜಿ ಸಚಿವ ವಿಜಯಾನಂದ ಕಾಶಪ್ಪನವರ್ ಶಾಪದ ಹೇಳಿಕೆಯನ್ನು ಮತ್ತೆ ಪುನರುಚ್ಚರಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಸಂದರ್ಭದಲ್ಲಿ ನಾನು ಹೇಳಿಕೆ ನೀಡಿದ್ದೆ, 2ಎ ಮೀಸಲಾತಿಗಾಗಿ ಶ್ರೀಗಳಿಗೆ ಪಾದಯಾತ್ರೆ ಮಾಡುವಂತೆ ಮಾಡಿದ್ರು, ಆದರೂ, ಅವರು ನೀಡಿದ ಮಾತನ್ನು ಉಳಿಸಿಕೊಳ್ಳಲಿಲ್ಲ, ಅದೇ ಕಾರಣಕ್ಕೆ, ಶ್ರೀಗಳ ಪಾದಯಾತ್ರೆ ಶಾಪ ಅವರಿಗೆ ತಟ್ಟಿದೆ, ಕೊಟ್ಟ ಮಾತನ್ನು ಯಾರು ಉಳಿಸಿಕೊಳ್ಳದಿದ್ರೆ, ಯಾರಾದ್ರೂ ಸರಿ ಅವರಿಗೆ ಶಾಪ ತಟ್ಟುತ್ತೆ ಎಂದು ವಿಜಯಾನಂದ ಕಾಶಪ್ಪನವರ್ ಪರೋಕ್ಷವಾಗಿ ಸಿಎಂ ಬೊಮ್ಮಯಿಗೆ ಶಾಪದ ಎಚ್ಚರಿಕೆ ನೀಡಿದರು.
ವಚನಾನಂದ ಸ್ವಾಮೀಜಿಗೆ ಟಾಂಗ್:
ವಚನಾನಂದ ಸ್ವಾಮೀಜಿ ಸಾಫ್ಟ್‌ವೇರ್ ನಾವು ಹಾರ್ಡ್ವೇರ್, ಅವರು ಎಸಿ ರೂಂ ಅಲ್ಲಿ ಕೂತು ಹೋರಾಟ ಮಾಡುತ್ತಾರೆ ನಾವು ಬಿಸಿಲಲ್ಲಿ ಹೋರಾಟ ಮಾಡುತ್ತೇವೆ, ಹೋರಾಟಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ ಯಾವಾಗ ಹೋಗುತ್ತಾರೋ ಆವಾಗ ಬಿಳ್ಕೋಡುಗೆ ಕೊಡುತ್ತೇವೆ, ಇಲ್ಲಿಂದಲೇ ಹೋರಾಟಕ್ಕೆ ಬಂದಿದ್ದರು ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದರು.
ಮೀಸಲಾತಿ ಸಿಹಿ ಸುದ್ದಿ ಕೊಟ್ರೆ ಸಿಎಂ ಬೊಮ್ಮಾಯಿಯವರಿಗೆ ಡೈಮಂಡ್ ಕಲ್ಲಿನ ಸಕ್ಕರೆ ತುಲಾಭಾರ ಮಾಡ್ತೀವಿ ಇಲ್ಲದಿದ್ದರೆ ಮತ್ತೆ ಬೃಹತ್ ಹೋರಾಟ ಹಾದಿ ಹಿಡಿಯಲಿದ್ದೇವೆ ಎಂದು ಕೂಡಲ ಸಂಗಮ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 24 ಗಂಟೆ ಒಳಗೆ ಸಿಎಂ ಅಥವಾ ಸರ್ಕಾರದ ಪ್ರತಿನಿಧಿ ಬಂದು ಸಿಹಿ ಸುದ್ದಿ ನೀಡಿದ್ರೆ ತುಲಾಭಾರ ಮಾಡಿ, ಉತ್ತರ ಕರ್ನಾಟಕ ಶೇಂಗಾ ಹೋಳಿಗೆ ಊಟ ನೀಡ್ತೇವೆ, ಇಲ್ಲದಿದ್ದರೆ 1 ನೇ ತಾರೀಖು ಬೆಂಗಳೂರಿನಲ್ಲಿ ಬೃಹತ್ ಹೋರಾಟ ಮಾಡ್ತೀವಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ರು.
ರಾಜ್ಯಸರ್ಕಾರ ಕೇಳಿದ್ದ ಕಾಲಾವಕಾಶ ಮುಗಿದಿದೆ:
ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಸನ್ನಿಧಿಯಿಂದ ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಜ್ಞಾ ಪಂಚಾಯತ್ ಇಂದು ದಾವಣಗೆರೆ ತಲುಪಿದ್ದು, ಇಂದಿನ ಸಮಾವೇಶ ಮುಗಿಸಿ ನಾಳೆ ಬೆಂಗಳೂರಿಗೆ ತಲುಪಲಿದ್ದೇವೆ. ನಾಳೆ ಕಾರ್ಯಕ್ರಮ ಮುಗಿಯುವುದರ ಒಳಗೆ ಸಿಎಂ ಆಗಲಿ ಹಾಗೂ ಸರ್ಕಾರದ ಪ್ರತಿನಿಧಿಗಳು ಬಂದ ನಿರ್ಣಯ ಹೇಳಬೇಕು. ಆಗ ನಾವು ಸತ್ಯಾಗ್ರಹವನ್ನು ಕೈಬಿಡುತ್ತೇವೆ, ಇಲ್ಲವಾದ್ರೆ ಮುಂದುವರೆಸುತ್ತೇವೆ ಎಂದರು.
ಸ್ವಾತಂತ್ರ್ಯಕ್ಕಾಗಿ ನೆಹರೂ ಮನೆಯಲ್ಲಿ ಕೂತು ಹೋರಾಟ:
ಎಸಿ ರೂಂಂನಲ್ಲಿ ಕೂತು ಹೋರಾಟ ಮಾಡ್ತಾರೆ, ಕೆಲವರು ಬೀದಿಗೆ ಬಂದು ಹೋರಾಟ ಮಾಡ್ತಾರೆ, ನೆಹರು ಸ್ವಾತಂತ್ರ್ಯ ಹೋರಾಟವನ್ನು ಮನೆಯಲ್ಲಿ ಕೂತು ಮಾಡಿದ್ರು, ಗಾಂಧೀಜಿ ಬೀದಿಗೆ ಇಳಿದು ಹೋರಾಟ ಮಾಡಿದ್ರು, ಭಗತ್ ಸಿಂಗ್ ಅದರಾಚೆಗೆ ಬಂದು ಹೋರಾಟ ಮಾಡಿದರು. ಹೀಗೆ ಇಷ್ಟು ದಿನ ಮನವಿ ನೀಡಿ ಹೋರಾಟ ಮಾಡಿದ್ವಿ, ಸಂಘಟನೆ ಹೋರಾಟ ಮಾಡದಿದ್ರೆ ನಡೆಯುವುದಿಲ್ಲ ಎಂದು ಹೋರಾಟದ ಹಾದಿ ಹಿಡಿದಿದ್ದೇವೆ ಎಂದರು.