ದಾವಣಗೆರೆ : ವೀರಶೈವ ಲಿಂಗಾಯತ ಮಹಾಸಭಾದಿಂದ ಆಯೋಜನೆ ಮಾಡಿದ ಮಹಾ ಅಧಿವೇಶನವನ್ನು ಮುಂದೂಡಲಾಗಿದೆ. ಡಿಸೆಂಬರ್ನಲ್ಲಿ ನಡೆಯಬೇಕಿದ್ದ ಮಹಾ ಅಧಿವೇಶನ ಫೆಬ್ರವರಿಯಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹಿರಿಯ ಶಾಸಕ, ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಡಿಸೆಂಬರ್ 24, 25, 26 ರಂದು ನಡೆಯಬೇಕಿದ್ದ ಮಹಾ ಅಧಿವೇಶನವನ್ನು, ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಇರುವುದರಿಂದ ಮುಂದೂಡಲಾಗಿದೆ. ಈ ಅಧಿವೇಶನವನ್ನು ಫೆಬ್ರವರಿ 11,12,13 ರಂದು ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವೀರಶೈವ ಮಹಾಸಭಾವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಕೆಂಪಣ್ಣ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ನೋಟಿಸ್ ನೀಡುವುದಾಗಿ ಕೆಂಪಣ್ಣ ಹೇಳಿಕೆ ನೀಡಿದ್ದರು. ನಮಗೆ ಯಾವುದೇ ನೋಟಿಸ್ ಬಂದಿಲ್ಲ. ಅವನಿಗೂ ಮಹಾಸಭೆಗೂ ಮತ್ತು ನಮಗೆ ಏನು ಸಂಬಂಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೆ ವೀರಶೈವ ಮಹಾಸಭಾ ಹೆಸರಿನಲ್ಲಿ ಲಿಂಗಾಯತ ಎನ್ನುವ ಪದ ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಪ್ರತ್ಯೇಕ ಲಿಂಗಾಯತ ಅಧಿವೇಶನ ಮಾಡಲು ನಿರ್ಧರಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಮನೂರು, ಜಾಮದಾರ್ ಮತ್ತೊಂದು ಅಧಿವೇಶನ ಮಾಡಲಿ. ನಾವೇನು ಬೇಡ ಅಂತೀವಾ. ಸಮಾಜಕ್ಕೆ ಏನಾದರೂ ಕೊಡುಗೆ ಇದೆಯಾ ಆತನದ್ದು. ಅವರ ಸಂಬಂಧಿಕರಿಗೆ ಏನಾದರೂ ಒಳ್ಳೆಯದು ಮಾಡಿದ್ದಾನಾ. ಸಮಾಜ ಮುಂದುವರೆಯುವುದನ್ನು ನೋಡಬೇಕು. ಒಗ್ಗಟ್ಟು ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಕಾನೂನು ಪ್ರಕಾರ ಮಹಾಸಭಾಗೆ ಲಿಂಗಾಯತ ಎನ್ನುವ ಪದವನ್ನು ಸೇರಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ :ರೈತರ ಕಬ್ಬಿಗೆ ಒಳ್ಳೆಯ ದರ ಕೊಡು: ಸಚಿವ ಶಿವರಾಮ್ ಹೆಬ್ಬಾರ್‌ಗೆ ಸಿಎಂ ಕಿವಿಮಾತು