ದಾವಣಗೆರೆ : ಬೆಣ್ಣೆನಗರಿಯಲ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಹೊಸ ವರ್ಷಕ್ಕೆ ದಾವಣಗೆರೆ ನಗರದ ಬೇಕರಿ ಮಾಲೀಕರು ವಿವಿಧ ಮಾದರಿಯ ಕೇಕ್ಗಳನ್ನು ತಯಾರಿಸಿ ಪ್ರದರ್ಶನ ಮಾಡಿದ್ದಾರೆ. ಕೇಕ್ಗಳನ್ನು ನೋಡಲು ಮತ್ತು ಕೊಳ್ಳಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.
ಹೊಸವರ್ಷ ಹಿನ್ನೆಲೆ ಇಲ್ಲಿನ ಆಹಾರ್ 2000 ಬೇಕರಿಯ ಮಾಲೀಕರು ನೂತನ ಪಾರ್ಲಿಮೆಂಟ್ ಮಾದರಿ ಕೇಕನ್ನು ಸಿದ್ಧಪಡಿಸಿದ್ದಾರೆ. ಈ ಕೇಕ್ ಬೆಣ್ಣೆ ನಗರಿಯ ಜನರ ಗಮನ ಸೆಳೆಯುತ್ತಿದೆ. ಕಳೆದ 2023ರ ನೂತನ ವರ್ಷಕ್ಕೆ ಆಹಾರ್ 2000 ಬೇಕರಿ ಮಾಲೀಕರು ಮಂದಿರ, ಮಸೀದಿ, ಚರ್ಚ್ ಮಾದರಿ ಕೇಕ್ಗಳನ್ನು ಪ್ರದರ್ಶನ ಮಾಡಿದ್ದರು. 2024ನೇ ಹೊಸ ವರ್ಷಕ್ಕೆ ಬೇಕರಿ ಮಾಲೀಕರು ನೂತನ ಪಾರ್ಲಿಮೆಂಟ್ ಮಾದರಿ ಕೇಕ್ ಸಿದ್ಧಪಡಿಸಿದ್ದಾರೆ.
ಆಹಾರ್ 2000 ಬೇಕರಿಯ ಮಾಲೀಕರಾದ ರಮೇಶ್ ಹಾಗು ಶ್ರೀನಿವಾಸ್ ಅವರು ಕಳೆದ 23 ವರ್ಷಗಳಿಂದ ಈ ಕೇಕ್ ಪ್ರದರ್ಶನವನ್ನು ಏರ್ಪಡಿಸುತ್ತಾ ಬಂದಿದ್ದಾರೆ. 2000ನೇ ಇಸವಿಯಲ್ಲಿ ಇವರು ಆಹಾರ್ ಬೇಕರಿಯನ್ನು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಹೊಸ ವರ್ಷಕ್ಕೆ ವಿವಿಧ ಮಾದರಿಯ ಕೇಕ್ಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದಾರೆ.
ಈ ನೂತನ ಪಾರ್ಲಿಮೆಂಟ್ ಮಾದರಿ ಕೇಕ್ನನ್ನು 200 ಕೆಜಿಯ ಸಕ್ಕರೆ ಮತ್ತು ಇತರೆ ವಸ್ತುಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ವಿಧಾನಸೌಧ, ಮೈಸೂರು ಅರಮನೆ, ಚನ್ನಕೇಶವ ದೇವಾಲಯ, ತಾಜ್ ಮಹಲ್, ಐಫೆಲ್ ಟವರ್ ಸೇರಿದಂತೆ ವಿವಿಧ ಮಾದರಿ ಕೇಕ್ಗಳನ್ನು ಇಲ್ಲಿ ಮಾಡಲಾಗಿದೆ. ಜೊತೆಗೆ ಮಾರಾಟಕ್ಕಾಗಿ 1500 ಕೇಕ್ಗಳನ್ನು ಸಿದ್ಧಪಡಿಸಿದ್ದು, ಸಾವಿರಕ್ಕೂ ಅಧಿಕ ಕೇಕ್ಗಳು ಮಾರಾಟವಾಗಿವೆ.
ಈ ಕುರಿತು ಮಾತನಾಡಿದ ಬೇಕರಿ ಮಾಲೀಕ ರಮೇಶ್, ಪ್ರತಿ ವರ್ಷದಂತೆ ಈ ವರ್ಷವೂ ನಾವು ಹೊಸವರ್ಷಕ್ಕೆ ವಿವಿಧ ಮಾದರಿಯ ಕೇಕ್ಗಳನ್ನು ಸಿದ್ಧಪಡಿಸಿದ್ದೇವೆ. ಈ ಬಾರಿ ಹೊಸ ಪಾರ್ಲಿಮೆಂಟ್ ಮಾದರಿ ಕೇಕ್ ಸಿದ್ಧಪಡಿಸಿದ್ದೇವೆ. ಕಳೆದ ಹಲವು ವರ್ಷಗಳಿಂದ ಈ ಕೇಕ್ ಪ್ರದರ್ಶನ ನಡೆಸಿಕೊಂಡು ಬರುತ್ತಿದ್ದೇವೆ. ಕಳೆದ ಬಾರಿ ಕಡಿಮೆ ವ್ಯಾಪಾರ ಆಗಿತ್ತು ಎಂದರು.
ತರಹೇವಾರಿ ಕೇಕ್ಗಳ ವ್ಯಾಪಾರ : ಬೇಕರಿ ಮಾಲೀಕ ಶ್ರೀನಿವಾಸ್ ಮಾತನಾಡಿ, ಈ ಬಾರಿ ಮಾರಾಟ ಮಾಡಲು 1500 ಮಾಡೆಲ್ ಕೇಕ್ಗಳನ್ನು ಮಾಡಿದ್ದೇವೆ. ಸ್ಟ್ರಾಬೇರಿ, ವೆನಿಲಾ, ಮ್ಯಾಂಗೋ, ಪಿಸ್ತಾ, ಚಾಕೋಲೆಟ್ ಸೇರಿದಂತೆ ವಿವಿಧ ಕೇಕ್ಗಳು ಲಭ್ಯವಿದೆ. ಒಂದು ವಾರ ಕಾಲಗಳ ಈ ಕೇಕ್ ಪ್ರದರ್ಶನ ನಡೆಯುತ್ತದೆ. ಜನ ನೂತನ ಪಾರ್ಲಿಮೆಂಟ್ ಮಾದರಿ ಕೇಕ್ ನೋಡಲು ಬರಬಹುದು. ಕಳೆದ ಬಾರಿ 1500 ಕೇಕ್ಗಳನ್ನು ಮಾರಾಟ ಮಾಡಿದ್ದೆವು, ಈ ಬಾರಿ ಕೂಡ 1500 ಕೇಕ್ಗಳನ್ನು ಸಿದ್ಧಪಡಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ಹಳೇ ಪದ್ಧತಿಗೆ ಬ್ರೇಕ್; ಮಾದರಿಯಾಗಿ ಹೊಸ ವರ್ಷ ಬರಮಾಡಿಕೊಂಡ ಬೆಂಗಳೂರು ಪೊಲೀಸರು