ದಾವಣಗೆರೆ : ಮೂರನೇ ಪೀಠದ ನಿರ್ಮಾಣಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೇಳಿದ್ದರು. ನಾವು ಸಹಕಾರ ಕೊಡುತ್ತೇವೆ. ನಮ್ಮ ಸಮಾಜಕ್ಕೆ ಪ್ರತಿ ಜಿಲ್ಲೆಗೆ ಪೀಠಗಳಾಗಲಿ ಭಯವಿಲ್ಲ. ಪೀಠಗಳು ಹೆಚ್ಚಾದರೆ ನಮ್ಮ ಪೀಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ಭೀತಿ ಇಲ್ಲ ಎಂದು ಪರೋಕ್ಷವಾಗಿ ಕೂಡಲಸಂಗಮ ಸ್ವಾಮೀಜಿ ವಿರುದ್ಧ ವಚನಾನಂದ ಶ್ರೀಗಳು ಕಿಡಿಕಾರಿದರು.
ಜಿಲ್ಲೆಯ ಹರಿಹರ ತಾಲೂಕಿನ ಪಂಚಮಸಾಲಿ ಪೀಠದಲ್ಲಿ ಮಾತನಾಡಿದ ಅವರು, ಹರಿಹರದ ಪಂಚಮಸಾಲಿ ಪೀಠ 20 ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದೆ. ವೀರಶೈವ ಪಂಚಮಸಾಲಿ ಒಕ್ಕೂಟ ಈಗಾಗಲೇ ಇದೆ. ಪಂಚಮಸಾಲಿ ಸಮಾಜದವರು ಮತಾಂತರ ಆಗುತ್ತಿದ್ದಾರೆ.
ಧಾರ್ಮಿಕವಾಗಿ ಸಂಘಟನೆಯಾಗಬೇಕು ಎಂದು ಸಂಘಟನೆ ಮಾಡಿಕೊಂಡಿದ್ದಾರೆ. ಮೂರನೇ ಪೀಠದ ಕುರಿತಂತೆ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕಿಡಿಕಾರಿದರು.
ಮೂರನೇ ಪೀಠದ ಒಕ್ಕೂಟದ ಅಧ್ಯಕ್ಷರು ಬಂದಿದ್ದರು : ಮೂರನೇ ಪೀಠದ ಒಕ್ಕೂಟದ ಅಧ್ಯಕ್ಷರು ಕೂಡ ನಮ್ಮ ಪೀಠಕ್ಕೆ ಬಂದಿದ್ದರು. ಹರಿಹರದ ಪೀಠ ಪಂಚಮಸಾಲಿ ಸಮಾಜದ ಮೂಲ ಪೀಠ ಎಂದು ಹೇಳಿದ್ದರು. ಅದರ ಜೊತೆಗೆ ಮೂರನೇ ಪೀಠದ ನಿರ್ಮಾಣಕ್ಕೆ ನಮ್ಮ ಸಹಕಾರವನ್ನು ಕೇಳಿದ್ದರು. ಇದಕ್ಕೆ ನಾವು ಸಹಮತ ನೀಡಡಿದ್ದೆವು. ಪೀಠಗಳು ಹೆಚ್ಚಾದರೆ ನಮ್ಮ ಸಮಾಜ ಹೆಚ್ಚು ಸಂಘಟನೆಯಾಗುತ್ತದೆ. ಆಯಾ ಭಾಗದಲ್ಲಿ ನಮ್ಮ ಸ್ವಾಮಿಗಳಿದ್ದರೆ ಜನರು ಸಂಘಟಿತರಾಗುತ್ತಾರೆ. ಅವರು ಕೇಳಿದ್ದಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ ಎಂದರು.
ಸಚಿವ ನಿರಾಣಿಯವರನ್ನು ಬಳಸಿಕೊಂಡಿದ್ದಾರೆ : ಸಚಿವ ಮುರಗೇಶ್ ನಿರಾಣಿಯವರನ್ನು ಪೀಠಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ. ಸಚಿವರು ತಮ್ಮ ಸ್ವಾರ್ಥಕ್ಕಾಗಿ ಪೀಠಗಳನ್ನು ಬಳಸಿಕೊಂಡಿಲ್ಲ. ನಮ್ಮ ಸಮಾಜದ 75 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಸುಖಾಸುಮ್ಮನೆ ನಿರಾಣಿಯವರ ಮೇಲೆ ಆರೋಪ ಸರಿಯಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಅವರು ಸಚಿವ ನಿರಾಣಿ ಪರ ಬ್ಯಾಟಿಂಗ್ ಬೀಸಿದರು.
ಇದನ್ನೂ ಓದಿ: ನಾನು ಸಿಎಂ ಆಗ್ಬೇಕು ಎಂದು ಕೂಗಿದ್ರೆ, ನಂಗೆ ಅಲ್ಲಿ ಹೊಡೆತ ಬೀಳಲಿದೆ: ಜಿ. ಪರಮೇಶ್ವರ್
ಕೂಡಲ ಸಂಗಮ ಶ್ರೀವಿರುದ್ಧ ಕಿಡಿ : ಪಾದಯಾತ್ರೆ ಹೋರಾಟ ಮಾಡಿದ್ದೀವಿ ಎಂದು ಪದೇಪದೆ ನಾವು ಹೇಳಿಲ್ಲ. ಸಮಾಜಕ್ಕೋಸ್ಕರ ಹೋರಾಟ ಮಾಡುವುದು ಅವರ ಕರ್ತವ್ಯ. ಆದರೆ, ಅದನ್ನೇ ಹೇಳಿಕೊಳ್ಳುತ್ತಾ ಹೋಗುವುದಲ್ಲ. ನಾವು ಈಗಾಗಲೇ ಮೀಸಲಾತಿ ಬಗ್ಗೆ ನ್ಯಾಯಬದ್ಧವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಜಯಮೃತ್ಯುಂಜಯ ಶ್ರೀ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ