ದಾವಣಗೆರೆ: ನಗರದ ಬೀರಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಪೂಜಾರಿ ನೇಮಕಕ್ಕೆ ದೇಗುಲದ ಹಳೆಯ ಪೂಜಾರಿ ಹಾಗೂ ಆತನ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಳ್ಳಾಟ, ನೂಕಾಟ ಮತ್ತು ಮಾತಿನ ಚಕಮಕಿ ನಡೆಯಿತು.
ದೇವಸಸ್ಥಾನದ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಬೀರಲಿಂಗೇಶ್ವರ ದೇಗುಲಕ್ಕೆ ಜಿಲ್ಲಾಡಳಿತದ ಆದೇಶದ ಮೇರೆಗೆ ಬೀಗ ಹಾಕಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ದೇಗುಲದಲ್ಲಿ ಪೂಜೆ ನಡೆಸುತ್ತಿದ್ದ ಅರ್ಚಕ ನಿಂಗರಾಜ್ ಕುಟುಂಬದ ನಡುವೆ ವ್ಯಾಜ್ಯ ನಡೆದಿತ್ತು. ಇದು ಜಿಲ್ಲಾಡಳಿತದ ಅಂಗಳದಲ್ಲಿತ್ತು. ದೇವಸ್ಥಾನದ ಆಸ್ತಿ ತಮಗೆ ಸೇರಿದ್ದು ಎಂಬುದು ಅರ್ಚಕ ನಿಂಗರಾಜ್ ಕುಟುಂಬದ ವಾದವಾಗಿತ್ತು. ಆದರೆ ಇದನ್ನು ತಿರಸ್ಕರಿಸಿದ್ದ ಜಿಲ್ಲಾಡಳಿತ, ಇದು ಆಡಳಿತ ಮಂಡಳಿಯದ್ದು ಎಂಬ ವಾದ ಪುರಸ್ಕರಿಸಿ ದೇವಸ್ಥಾನಕ್ಕೆ ಬೀಗ ಹಾಕುವಂತೆ ಕಳೆದ ಆರು ತಿಂಗಳ ಹಿಂದೆ ಆದೇಶಿಸಿತ್ತು.
ಆದರೆ ಇಂದು ಬೇರೆ ಪೂಜಾರಿ ಕರೆ ತಂದು ಪೂಜೆ ಆರಂಭಿಸಲು ಜಿಲ್ಲಾಡಳಿತ ಮುಂದಾಗುತ್ತಿದ್ದಂತೆ ಹಳೆಯ ಪೂಜಾರಿ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ದೇಗುಲದ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೂಜೆ ಆರಂಭಿಸಿ ಎಂದು ದೇವಸ್ಥಾನ ಸಮಿತಿಯವರು ಪಟ್ಟು ಹಿಡಿದರು. ಬೇರೆ ಪೂಜಾರಿಗಳಿಂದ ಪೂಜೆ ಬೇಡ ಎಂದು ಹಳೆಯ ಪೂಜಾರಿ ಆಗ್ರಹಿಸಿದರು. ಆಗ ಎರಡು ಗುಂಪುಗಳಿಂದ ದೇವಸ್ಥಾನದ ಮುಂದೆ ಧರಣಿ ನಡೆಯಿತು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿದರು. ಪೂಜಾರಿ ಲಿಂಗರಾಜ್ ಹಾಗೂ ಕುಟುಂಬದವರನ್ನು ವಶಕ್ಕೆ ಪಡೆದರು. ಬಳಿಕ ದೇಗುಲದ ಬಾಗಿಲನ್ನು ತೆಗೆದರು. ದೇವಸ್ಥಾನದ ಆಸ್ತಿ ವಿಚಾರ ಸಂಬಂಧ ಲಿಂಗರಾಜ್ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ನಡುವೆಯೇ ಜಿಲ್ಲಾಡಳಿತ ದೇಗುಲಕ್ಕೆ ಹೊಸ ಪೂಜಾರಿ ನೇಮಕ ಮಾಡಿ ಆದೇಶ ಹೊರಡಿಸಿ ದೇಗುಲ ತೆರೆಸಿ ಪೂಜೆಗೆ ಅನುವು ಮಾಡಿಕೊಟ್ಟಿದೆ.