ದಾವಣಗೆರೆ: ಬೆಣ್ಣೆ ನಗರಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು, ಜಿಲ್ಲೆಯಲ್ಲಿ ಐದು ಕಡೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಗೃಹ ಸಚಿವರು, ಸೇನಾ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಪ್ರಯಾಣ ಬೆಳೆಸಲಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪುತ್ರಿ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2.50ಕ್ಕೆ ಹುಬ್ಬಳ್ಳಿಯಿಂದ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಜಿಎಂಐಟಿ ಹೆಲಿಪ್ಯಾಡ್ಗೆ ಆಗಮಿಸಿ, ದಾವಣಗೆರೆಯ ರಾಮ್ನಗರದಲ್ಲಿರುವ ಗಾಂಧಿ ಭವನ ಉದ್ಘಾಟಿಸಲಿದ್ದಾರೆ.
ಬಳಿಕ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಬಳಿಯ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿರುವ ಕೊಂಡಜ್ಜಿ ಬಸಪ್ಪ ಸ್ಮಾರಕಕ್ಕೆ ಗೌರವಾರ್ಪಣೆ ಮಾಡಲಿದ್ದು, ಗ್ರಾಮದ ಹೊರ ವಲಯದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆ ಉದ್ಘಾಟನೆ ಮಾಡಲಿದ್ದಾರೆ. ನಂತರ ಜಿಎಂಐಟಿ ಕಾಲೇಜು ಅವರಣದಲ್ಲಿ ನಿರ್ಮಾಣವಾದ ಜಿಎಂಐಟಿ ಕೇಂದ್ರ ಗ್ರಂಥಾಲಯ (ಸಂಸದ ಜಿಎಂ ಸಿದ್ದೇಶ್ವರ್ ಒಡೆತನದ ಕಾಲೇಜು) ಉದ್ಘಾಟಿಸುವರು. ಸಂಜೆ 5 ಗಂಟೆ ವೇಳೆಗೆ ಹುಬ್ಬಳ್ಳಿಗೆ ಜಿಎಂಐಟಿ ಹೆಲಿಪ್ಯಾಡ್ನಿಂದ ಪ್ರಯಾಣ ಬೆಳೆಸಲಿದ್ದಾರೆ.
ಸಿಎಂ ಜೊತೆ ಮಾತುಕತೆ:
ಕಾರ್ಯಕ್ರಮದ ನಡುವೆ ಅಮಿತ್ ಶಾ, ಜಿಎಂಐಟಿ ಅತಿಥಿಗೃಹದಲ್ಲಿ ಅರ್ಧ ಗಂಟೆ ಮತ್ತು ಹುಬ್ಬಳ್ಳಿಯಲ್ಲಿ ಒಂದು ಗಂಟೆ ಸಮಯವನ್ನು ಕಾಯ್ದಿರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಪಕ್ಷದಲ್ಲಿನ ಅಸಮಾಧಾನ, ರೆಬೆಲ್ ಚಟುವಟಿಕೆಗಳ ನಿಯಂತ್ರಣಕ್ಕೆ ಸೂಚನೆ ನೀಡಲಿದ್ದಾರೆ. ಅಲ್ಲದೇ, ಯಡಿಯೂರಪ್ಪ ರಾಜ್ಯ ಪ್ರವಾಸ ಕುರಿತು ಸ್ಪಷ್ಟ ಸೂಚನೆ ಮೂಲಕ ಗೊಂದಲ ನಿವಾರಿಸುವ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಮೂವರು ಮಕ್ಕಳು ಸೇರಿ ಐವರ ದುರ್ಮರಣ.. ಒಬ್ಬರ ಪ್ರಾಣ ಉಳಿಸಲು ಹೋಗಿ ಸಾವು