ದಾವಣಗೆರೆ: ತೋಟದಿಂದ ವಾಪಸ್ ಮನೆಗೆ ಬರುವಾಗ ರೈತನೊಬ್ಬ ಏಕಾಏಕಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜಪ್ಪ (52) ನೀರಿನಲ್ಲಿ ಕೊಚ್ಚಿಕೊಂಡು ಹೋದ ರೈತ. ಚಿಕ್ಕಗಂಗೂರ ಗ್ರಾಮದ ಬಳಿ ಇರುವ ಹಿರೇಹಳ್ಳದಲ್ಲಿ ಘಟನೆ ಜರುಗಿದ್ದು, ತೋಟದಿಂದ ವಾಪಸ್ ಮನೆಗೆ ಬರುವಾಗ ಅವಘಡ ಜರುಗಿದೆ. ರೈತನಿಗಾಗಿ ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದು, ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೆಲ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ ಹಿರೇಹಳ್ಳ ತುಂಬಿ ಹರಿಯುತ್ತಿದೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಈಜಲು ಹೋಗಿ ಬಾಲಕ ಸಾವು: 4 ಗಂಟೆ ಉಪ್ಪಿನಲ್ಲಿ ಶವವಿಟ್ಟು ಬದುಕಿಸಲು ಪ್ರಯತ್ನ!
ಈಜಲು ಹೋದ ಯುವಕ ನೀರುಪಾಲು: ಚೆಕ್ ಡ್ಯಾಂ ನಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಜಗಳೂರು ತಾಲೂಕಿನ ದೇವಪುರ ಗ್ರಾಮದಲ್ಲಿ ನಡೆದಿದೆ. ಶವಕ್ಕಾಗಿ ಶೋಧ ಕಾರ್ಯ ಮುಂದುವರೆಸಲಾಗಿದ್ದು, ಅಭಿಷೇಕ್ (30) ಸಾವನ್ನಪ್ಪಿದ ಯುವಕ.
ಇದನ್ನೂ ಓದಿ: ಈಜು ಬಾರದಿದ್ದರೂ ಸಮುದ್ರಕ್ಕೆ ಹಾರಿ ಹುಚ್ಚಾಟ : ನೋಡ ನೋಡುತ್ತಿದ್ದಂತೆ ಓರ್ವ ಸಾವು
ದೇವಪುರ ಗ್ರಾಮದ ಜನಗಿಹಳ್ಳಕ್ಕೆ ಅಡ್ಡಲಾಗಿ ಕಟ್ಟಲಾದ ಚೆಕ್ ಡ್ಯಾಂನಲ್ಲಿ ಅಭಿಷೇಕ್ ಹಾಗೂ ಆತನ ಇಬ್ಬರು ಜನ ಸ್ನೇಹಿತರು ಈಜಾಡಲು ಹೋಗಿದ್ದರು. ಇಬ್ಬರು ಸುರಕ್ಷಿತವಾಗಿ ದಡ ಸೇರಿದ್ರೆ, ಅಭಿಷೇಕ್ ಮಾತ್ರ ನೀರಿನಲ್ಲಿ ಮುಳುಗಿ ಮೇಲೇಳಲಾಗದೇ ನೀರುಪಾಲಾಗಿದ್ದಾನೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಕ್ಕಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.