ದಾವಣಗೆರೆ :ಹರಿಹರ ನಗರಸಭೆ ಚುನಾವಣೆ ಕಾವು ರಂಗೇರಿದೆ. ನಾಳೆ ಮತದಾನ ನಡೆಯಲಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿ ಬಿಜೆಪಿ ಗೆಲುವಿಗೆ ತೀವ್ರ ಕಸರತ್ತು ನಡೆಸಿದೆ. ಬಿರುಸಿನ ಪ್ರಚಾರವನ್ನೂ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕೈ ಮತ್ತು ತೆನೆ ಹೊತ್ತ ಅಭ್ಯರ್ಥಿಗಳೂ ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ.
ಈ ನಗರಸಭೆಯಲ್ಲಿ ಒಟ್ಟು 31 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿ ಕಾಂಗ್ರೆಸ್ 13, ಜೆಡಿಎಸ್ 11 ಸ್ಥಾನ ಪಡೆದಿದ್ದರೆ, ಕೆಜೆಪಿ 4, ಇಬ್ಬರು ಪಕ್ಷೇತರರು ಗೆದ್ದಿದ್ದರು. ಆದ್ರೆ, ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಬಿಜೆಪಿಯಿಂದ ಮಾಜಿ ಸಿಎಂ ಹೊರ ಬಂದು ಕೆಜೆಪಿ ಕಟ್ಟಿದ ಪರಿಣಾಮ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಕೆಜೆಪಿಯ ನಾಲ್ವರು ಅಭ್ಯರ್ಥಿಗಳು ಗೆದ್ದಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆಗ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರಿದ್ದವು. ಕಳೆದ ಬಾರಿ ಬಿಜೆಪಿಯ ಒಳಜಗಳದಿಂದ ಹೀನಾಯ ಪ್ರದರ್ಶನ ನೀಡಿದ್ದ ಬಿಜೆಪಿ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿದೆ.
ಹರಿಹರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿರುವುದು ವಿಶೇಷ. ಇಲ್ಲಿ ಮಹಿಳೆಯರ ಮತಗಳೇ ನಿರ್ಣಾಯಕ. ಹಾಗಾಗಿ, ಹೆಂಗಳೆಯರ ಮನ ಸೆಳೆಯಲು ಎಲ್ಲ ಪಕ್ಷದ ಅಭ್ಯರ್ಥಿಗಳು ಕಸರತ್ತು ನಡೆಸಿದ್ದಾರೆ. ಒಟ್ಟಿನಲ್ಲಿ ಹರಿಹರ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದು, ಇಲ್ಲಿ ಯಾರು ಅಧಿಕಾರಕ್ಕೆ ಏರುತ್ತಾರೆ ಎಂದು ಹೇಳುವುದು ಕಷ್ಟ. ಕಾಂಗ್ರೆಸ್ - ಜೆಡಿಎಸ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ಮತ್ತೆ ಕೈ ಮತ್ತು ತೆನೆ ಹೊತ್ತ ಮಹಿಳೆ ಅಧಿಕಾಕ್ಕೇರುತ್ತಾ ? ಬಿಜೆಪಿ ಕಮಾಲ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.